ಭಟ್ಕಳ:ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಭಟ್ಕಳದಲ್ಲಿ ಸೋಮವಾರ ತಡರಾತ್ರಿ 2 ಕೋವಿಡ್-19 ಪಾಸಿಟಿವ್ ದೃಢವಾಗಿವೆ. ಈ ಹಿನ್ನೆಲೆ ಜಿಲ್ಲಾ ಸಿಇಒ ಮಹಮ್ಮದ್ ರೋಶನ್ ನಗರದಲ್ಲಿಯೇ ಮೊಕ್ಕಾಂ ಹೂಡಿ ಮಂಗಳವಾರದಂದು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಮಾರ್ಚ್ 21ರಂದು ದುಬೈನಿಂದ ಮಂಗಳೂರಿಗೆ ಬಂದು ಭಟ್ಕಳಕ್ಕೆ ಬಂದಿದ್ದ ಓರ್ವ (40) ವ್ಯಕ್ತಿ, ಖುದ್ದಾಗಿ ಬಂದು ಪರೀಕ್ಷೆಗೆ ಒಳಗಾಗಿದ್ದರು. ಹಾಗೂ ದುಬೈನಿಂದ ಬಂದಿದ್ದ ಮತ್ತೊರ್ವ ವ್ಯಕ್ತಿಯನ್ನು (65) ಮಾರ್ಚ್ 21 ರಂದು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು.
ಭಟ್ಕಳದಲ್ಲಿ ಮತ್ತೆರಡು ಕೊರೊನಾ ಪಾಸಿಟವ್ ಪತ್ತೆ ಇಬ್ಬರಿಬ್ಬರ ಕಫದ ಪರೀಕ್ಷೆಯ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಸೋಮವಾರ ತಡರಾತ್ರಿ ವರದಿ ಬಂದಿದ್ದು ಇಬ್ಬರಲ್ಲಿಯೂ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿನ ಎಲ್ಲ ಒಳರೋಗಿಗಳನ್ನು ಶಿರಾಲಿ ಸಮುದಾಯ ಕೇಂದ್ರಕ್ಕೆ ಆ್ಯಂಬಲೆನ್ಸ್ ಮೂಲಕ ಸ್ಥಳಾಂತರಿಸಿದ್ದಾರೆ.
ಭಟ್ಕಳದಲ್ಲಿಯೇ ಮೊಕ್ಕಾಂ ಹೂಡಿದ ಜಿಲ್ಲಾ ಸಿ.ಇ.ಒ.:ಜಿಲ್ಲೆಯಲ್ಲಿ ಮೂರನೇ ಸೋಂಕು ದೃಢವಾಗುತ್ತಲೇ ಎಚ್ಚೆತ್ತುಕೊಂಡು ಜಿಲ್ಲಾ ಪಂಚಾಯಿತಿ ಸಿಇಒ ಮಹಮ್ಮದ್ ರೋಷನ್ ರಾತ್ರೋ ರಾತ್ರಿ ಭಟ್ಕಳಕ್ಕೆ ಬಂದಿ ಮೊಕ್ಕಾಂ ಹೂಡಿದ್ದಾರೆ. ಸೋಂಕು ದೃಢಪಟ್ಟ ಹಿನ್ನೆಲೆ ತುರ್ತು ಚಿಕಿತ್ಸಾ ಘಟಕಗಳನ್ನ ಸಿದ್ದಪಡಿಕೆಗೆ ಜಿಲ್ಲಾಡಳಿತ ಮುಂದಾಗಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ನಿರ್ಮಾಣ ಮಾಡಿದ್ದಾರೆ.
ಒಟ್ಟು 400 ಜನರಿಗೆ ಚಿಕಿತ್ಸೆ ಕೊಡಲು ಸಿದ್ಧತೆ ಮಾಡಿಕೊಂಡ ಜಿಲ್ಲಾಡಳಿತ, ಸೋಂಕು ಹರಡದಂತೆ ಆಶಾ ಕಾರ್ಯಕರ್ತರಿಗೆ ಜಿಲ್ಲಾ ಸಿಇಒ ಮಹಮ್ಮದ್ ರೋಷನ್ ನೇತೃತ್ವದಲ್ಲಿ ತರಬೇತಿಯನ್ನು ಕೈಗೊಂಡಿದ್ದಾರೆ. ಇದೇ ವೇಳೆ 80 ತಂಡಗಳನ್ನ ರಚಿಸಿ ಪಟ್ಟಣದ 22 ವಾರ್ಡ್ಗಳಲ್ಲಿ 9 ಸಾವಿರ ಮನೆಗಳ ತಪಾಸಣೆ ನಡೆಸಲು ಸೂಚಿಸಿದರು.
ಭಟ್ಕಳದ ಸರಕಾರಿ ಆಸ್ಪತ್ರೆ ಓಪಿಡಿ ಶಿರಾಲಿಗೆ
ಸದ್ಯ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಭಟ್ಕಳ ಸರಕಾರಿ ಆಸ್ಪತ್ರೆಯನ್ನು ಕೇವಲ ಕೋವಿಡ್-19 ತಪಾಸಣೆ ಸಂಬಂಧಕ್ಕೆ ಮಾತ್ರ ಬಳಸುತ್ತಿದ್ದು ಎಲ್ಲಾ ಒಳರೋಗಿಗಳ ಒಪಿಡಿ, ತುರ್ತು ಚಿಕಿತ್ಸೆಯನ್ನು ಶಿರಾಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.