ಕಾರವಾರ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಬ್ಯಾಂಕ್ ಸಿಇಒ ಹಾಗೂ ನೌಕಾನೆಲೆ ಅಧಿಕಾರಿಗೆ 4.49 ಲಕ್ಷ ವಂಚನೆ ಮಾಡಿರುವ ಬಗ್ಗೆ ಜಿಲ್ಲಾ ಸೈಬರ್ ಅಪರಾಧ ಠಾಣೆಗೆ ದೂರು ದಾಖಲಾಗಿದೆ.
ಅಂಕೋಲಾ ತಾಲೂಕಿನ ಅವರ್ಸಾದಲ್ಲಿರುವ ಭಾರತೀಯ ನೌಕಾದಳದ ಶಸ್ತ್ರಾಗಾರ ವಜ್ರಕೋಶದಲ್ಲಿ ಸೇನಾ ಅಧಿಕಾರಿಯಾಗಿರುವ ಗುರುಜಿತ್ ಸಿಂಗ್ ಅವರ ಖಾತೆಯಿಂದ 49 ಸಾವಿರ ರೂ. ಲಪಟಾಯಿಸಲಾಗಿದೆ. ಇತ್ತೀಚೆಗೆ ತಾನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ವಿಭಾಗದ ಮುಖ್ಯಸ್ಥ ಎಂದು ಕರೆ ಮಾಡಿದ ವ್ಯಕ್ತಿಯೋರ್ವ ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಹೇಳಿ ಎನಿಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ತಾನು ಹೇಳಿದಂತೆ ಮಾಡಲು ಸೂಚಿಸಿದ್ದಾನೆ. ಇದನ್ನು ಪಾಲಿಸಿದ ಗುರುಜಿತ್ ಸಿಂಗ್ ಖಾತೆಯಿಂದ ಹಣ ಕಡಿತವಾಗಿದೆ.
ಬ್ಯಾಂಕ್ ಸಿಇಒ ಖಾತೆಯಿಂದ 4 ಲಕ್ಷ ವರ್ಗಾವಣೆ!:
ಇನ್ನು ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರತಿ ಶೆಟ್ಟರ್ ಎಂಬುವವರ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಖಾತೆಯಿಂದ ₹ 4 ಲಕ್ಷವನ್ನು ವ್ಯಕ್ತಿಯೊಬ್ಬರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಶಾಖೆಯಲ್ಲಿ ಖಾತೆ ಹೊಂದಿದ್ದ ಅವರು, ಹೂಡಿಕೆ ವ್ಯವಹಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಕಚೇರಿ ಇ ಮೇಲ್ ಹ್ಯಾಕ್ ಮಾಡಿದ್ದಾರೆ. ಬಳಿಕ ಬ್ಯಾಂಕ್ಗೆ ಮೇಲ್ ಮಾಡಿ 4 ಲಕ್ಷ ಬಾಲಗೋಪಾಲ ತ್ರಿಪಾಟಿ ಎನ್ನುವವರ ಕರೂರು ವೈಶ್ಯ ಬ್ಯಾಂಕ್ ಖಾತೆಗೆ ಹಣವನ್ನು ಆರ್ಟಿಜಿಎಸ್ ಮಾಡುವಂತೆ ತಿಳಿಸಿದ್ದಾರೆ. ಆದರೆ, ಈ ವೇಳೆ ಬ್ಯಾಂಕ್ ಅಧಿಕಾರಿಗಳು ಸಂಬಂಧಪಟ್ಟವರನ್ನು ಸಂಪರ್ಕಿಸಿ ಖಾತ್ರಿ ಪಡಿಕೊಳ್ಳಬೇಕೆಂದಿದ್ದರು ಮಾಡಿರಲಿಲ್ಲ ಎನ್ನಲಾಗಿದೆ.
ಸ್ವಲ್ಪ ದಿನಗಳ ಬಳಿಕ ಮತ್ತೆ ಅದೇ ವ್ಯಕ್ತಿ 30 ಲಕ್ಷ ವರ್ಗಾವಣೆ ಮಾಡಲು ತಿಳಿಸಿದಾಗ ಬ್ಯಾಂಕ್ ಅಧಿಕಾರಿಗಳು ಆರತಿ ಅವರಿಗೆ ಕರೆ ಮಾಡಿ ತಿಳಿಸಿದ್ದರು. ತಾವು ಹೇಳಿಲ್ಲ ಎಂದು ಪರೀಶಿಲಿಸಿದಾಗ 5 ಲಕ್ಷ ವಂಚಿಸಿರುವುದು ಪಕ್ಕಾ ಆಗಿದೆ. ಆದರೆ ನಿರ್ಲಕ್ಷ್ಯ ವಹಿಸಿದ ಬ್ಯಾಂಕ್‌ನ ಬೆಂಗಳೂರು ಶಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ವರ್ಗಾವಣೆಗೊಂಡ ಖಾತೆಯ ಬಾಲಗೋಪಾಲ ತ್ರಿಪಾಟಿ ಎನ್ನುವವರ ವಿರುದ್ಧ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.