ಕಾರವಾರ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಹಿಳೆ ಹಾಗೂ ಯುವತಿಯ ಹೊಟ್ಟೆಯಲ್ಲಿದ್ದ ಗೆಡ್ಡೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ಕಾರವಾರ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿದೆ.
ಯುವತಿ ಅಂಡಾಶಯದಲ್ಲಿ ಬೆಳೆದಿತ್ತು 10 ಕೆ.ಜಿ. ಗೆಡ್ಡೆ... ಆಪರೇಷನ್ ಸಕ್ಸಸ್ ಆಯ್ತಾ? - ಯಶಸ್ವಿಯಾಯ್ತು 'ಗಡ್ಡೆ'ಯ ಆಪರೇಷನ್
ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಹಿಳೆ ಹಾಗೂ ಯುವತಿಯ ಹೊಟ್ಟೆಯಲ್ಲಿದ್ದ ಗೆಡ್ಡೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ಕಾರವಾರ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿದೆ.
ಇಲ್ಲಿನ ಸದಾಶಿವಗಡದ 45 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿ 800 ಗ್ರಾಂ.ನ ಗೆಡ್ಡೆಯೊಂದು ಬೆಳೆದಿತ್ತು. ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತಿದ್ದ ಈ ಗೆಡ್ಡೆಯನ್ನು ತೆಗೆಯಲು ಮಣಿಪಾಲ ಆಸ್ಪತ್ರೆಯ ವೈದ್ಯರು ಹಿಂಜರಿದಿದ್ದರು. ಇದರಿಂದಾಗಿ ರೋಗಿಯು ಮರಳಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಕುಡ್ತರಕರ್ ಅವರು ಶಸ್ತ್ರ ಚಿಕಿತ್ಸೆಯ ಮೂಲಕ ಇದನ್ನು ಹೊರ ತೆಗೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಗೋವಾ ಪರ್ತಗಾಳಿಯ 23 ವರ್ಷದ ಯುವತಿಯೊಬ್ಬಳ ಹೊಟ್ಟೆಯಲ್ಲಿ 10 ಕೆ.ಜಿ. ಗಾತ್ರದ ಅಂಡಾಶಯ ಗೆಡ್ಡೆ ಬೆಳೆದಿತ್ತು. ಸ್ಕ್ಯಾನಿಂಗ್ ವರದಿಯ ಆಧಾರದ ಮೇಲೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕುಡ್ತರಕರ್ ಅವರಿಗೆ ಸಹಾಯಕ ಸರ್ಜನ್ ಡಾ.ಪೂಜಾ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್, ಅರವಳಿಕೆ ತಜ್ಞ ಡಾ.ಭರತ್ ಹಾಗೂ ಶುಷ್ರೂಷಕಿಯರು ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದಾರೆ.