ಕಾರವಾರ: ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಬಹಿಷ್ಕಾರ ಎಂಬ ಸಾಮಾಜಿಕ ಪಿಡುಗು ಜನರನ್ನು ಬಾಧಿಸುತ್ತಲೇ ಇದೆ. ಬಹಿಷ್ಕಾರದ ಪರಿಣಾಮದಿಂದ ಎಷ್ಟೋ ಕುಟುಂಬಗಳು ಮಾನಸಿಕವಾಗಿ ಜರ್ಝರಿತಗೊಂಡಿವೆ. ಇಂತಹದೇ ಸಮುದಾಯ ಬಹಿಷ್ಕಾರ ಪ್ರಕರಣವೊಂದು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಹೌದು, ಕರಾವಳಿ ಜಿಲ್ಲೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಅನ್ನೋ ಗ್ರಾಮದಲ್ಲಿ ಗೌಡರ ಕೇರಿಯ ಹಾಲಕ್ಕಿ ಸಮುದಾಯದ ಬಂಟಾ ವೆಂಕು ಗೌಡ ಎನ್ನುವವರ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಲಾಗಿದೆ. ಅವರದ್ದೇ ಸಮುದಾಯದ ಊರ ಗೌಡರು ಮದುವೆಗೆ ವೀಳ್ಯ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ಈ ಕುಟುಂಬವು ಸಾಮಾಜಿಕ ಅನ್ಯಾಯಕ್ಕೆ ಒಳಗಾಗಿ ಪರಿತಪಿಸುವಂತಾಗಿದೆ.
ಮದುವೆಗೆ ವೀಳ್ಯ ನೀಡದಕ್ಕೆ ಸಾಮಾಜಿಕ ಬಹಿಷ್ಕಾರ ಕಳೆದ 10 ವರ್ಷಗಳ ಹಿಂದೆ ಹಾರವಾಡದ ಗೌಡರಕೇರಿಯಲ್ಲಿ ನಡೆದ ಬಂಟಾ ವೆಂಕು ಗೌಡರ ಮಗನ ಮದುವೆಗೆ ಊರ ಗೌಡರಿಗೆ ವೀಳ್ಯ ನೀಡಲಿಲ್ಲ ಎನ್ನುವ ಕಾರಣಕ್ಕೆ, ಊರಗೌಡರಾದ ಆನಂದ ಸಿದ್ದಾಗೌಡ ಎಂಬಾತರು ತನ್ನ ಸಮಾಜದವರ ಸಭೆ ನಡೆಸಿ ಬಂಟಾ ವೆಂಕು ಗೌಡ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು.
ಯಾರೊಬ್ಬರೂ ಮಾತನಾಡುವುದಿಲ್ಲ: ಅಂದಿನಿಂದ ಇಂದಿನವರೆಗೂ ಸಮುದಾಯದ ಮಂದಿ ಊರಿನಲ್ಲಿ ಆ ಕುಟುಂಬದೊಂದಿಗೆ ಮಾತನಾಡುವಂತಿಲ್ಲ. ಅವರಿಗೆ ಸಹಾಯ ಮಾಡುವಂತಿಲ್ಲ, ನೀರು ಕೊಡುವಂತಿಲ್ಲ, ಅಂಗಡಿಗಳಲ್ಲಿ ದಿನಸಿ ನೀಡುವಂತಿಲ್ಲ ಎಂದು ಬಹಿಷ್ಕಾರ ಹಾಕಿ ಆದೇಶ ಹೊರಡಿಸಿದ್ದಾರಂತೆ. ಹೀಗಾಗಿ, ಅಂದಿನಿಂದ ಇಂದಿನವರೆಗೂ ಬಂಟಾ ವೆಂಕು ಗೌಡರ ಕುಟುಂಬದವರೊಂದಿಗೆ ಸಮುದಾಯದ ಯಾರೊಬ್ಬರೂ ಮಾತನಾಡುವುದಿಲ್ಲ ಎಂದು ಬಂಟಾ ವೆಂಕು ಗೌಡರ ಮಗ ವಿಜಯ ಬಂಟಾ ಗೌಡ ಆರೋಪಿಸಿದ್ದಾರೆ.
ದಾಯಾದಿ ಕಲಹಕ್ಕೆ ಎಡೆ: ಇನ್ನು ಬಹಿಷ್ಕಾರ ಹಾಕಿದ ಊರ ಗೌಡ ಆನಂದ ಸಿದ್ದಾ ಗೌಡ ಹಾಗೂ ಬಹಿಷ್ಕಾರಕ್ಕೆ ಒಳಗಾಗಿದ್ದ ಬಂಟಾ ವೆಂಕು ಗೌಡರವರ ಕುಟುಂಬದವರು, ಈ ಮೊದಲು ಒಟ್ಟಾಗಿ ಜೀವನ ನಡೆಸುತ್ತಿದ್ದರು. ದಿನಕಳೆದಂತೆ ಪ್ರಾರಂಭವಾದ ಚಿಕ್ಕ ಚಿಕ್ಕ ಗೊಂದಲಗಳು ಆಸ್ತಿ ವಿಚಾರದವರೆಗೂ ತಲುಪಿ ದೊಡ್ಡಮಟ್ಟದ ದಾಯಾದಿ ಕಲಹಕ್ಕೆ ಎಡೆಮಾಡಿಕೊಟ್ಟಿತ್ತು. ಅಂದು ಅವಿಭಕ್ತ ಕುಟುಂಬವಾಗಿದ್ದ ಊರ ಗೌಡರ ಕುಟುಂಬ ವಿಭಕ್ತವಾಗಿ ಬೇರ್ಪಟ್ಟಿತ್ತು. ಅಂದಿನಿಂದ ಬಂಟಾ ವೆಂಕು ಗೌಡ ಅವರು ಮೂಲ ಮನೆಗೆ ಕಾಲಿಟ್ಟಿರಲಿಲ್ಲವಂತೆ.
ಅಧಿಕಾರ ದುರ್ಬಳಕೆ: 2012 ರಲ್ಲಿ ಹಿರಿ ಮಗನ ಮದುವೆ ಮಾಡಿದ್ದ ಬಂಟಾ ಗೌಡರು ತನ್ನ ಮೂಲ ಮನೆಗೆ ವೀಳ್ಯ ನೀಡಿರಲಿಲ್ಲ. ಊರಗೌಡರ ಮನೆಗೆ ಮದುವೆಯ ಆಮಂತ್ರಣ ಮಾಡಲಿಲ್ಲ ಎನ್ನುವ ಕಾರಣಕ್ಕೆ ಊರಗೌಡರು ಬಹಿಷ್ಕಾರ ಹಾಕಿದ್ದು ಸಮುದಾಯದವರನ್ನು ದಾರಿತಪ್ಪಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ರೀತಿ ಯಾವುದೇ ಸಮುದಾಯದ ಯಾವ ಕುಟುಂಬಕ್ಕೂ ಆಗಬಾರದು ಅಂತಾ ಬಂಟಾ ಗೌಡರ ಪತ್ನಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಟ್ಟು ನಿಟ್ಟಿನ ಸೂಚನೆ:ಬಂಟಾ ವೆಂಕಾಗೌಡರ ಮಗ ಬಹಿಷ್ಕಾರದಿಂದ ಮುಕ್ತಿ ಹೊಂದಲು ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಹಿಷ್ಕಾರದಿಂದ ಮನನೊಂದಿದ್ದ ಮನೆ ಯಜಮಾನ ಬಂಟಾ ವೆಂಕಗೌಡ ಕೆಲ ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಸದ್ಯ ಊರಿನಲ್ಲಿ ಕುಟುಂಬದವರಿಗೆ ಹೆಣ್ಣು, ಗಂಡು ಕೊಡಲು ಯಾರೂ ಮುಂದೆ ಬರದೇ ಇರುವುದು ಕುಟುಂಬ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಆದರೆ ಇದೀಗ ಬಹಿಷ್ಕಾರ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಕುಟುಂಬಗಳ ವಿಚಾರಣೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಓದಿ:ಬಿಜೆಪಿ ಶಾಸಕ ಓಲೇಕಾರ್ ಅಭಿಮಾನಿಗಳಿಂದ ಸಿಎಂ ಬೊಮ್ಮಾಯಿಗೆ ಕಪ್ಪುಬಟ್ಟೆ ಪ್ರದರ್ಶನ