ಶಿರಸಿ (ಉತ್ತರ ಕನ್ನಡ) :ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರವೇ ವಾಪಸ್ ಪಡೆದಿದ್ದು, ರಾಜ್ಯದಲ್ಲಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವ ಧಮ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಯಾ ಎಂದು ರೈತ ಸಂಘ ಮತ್ತು ರಾಜ್ಯ ಹಸಿರುಸೇನೆ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್ ಚಾಲೆಂಜ್ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಕೃಷಿ ಕಾಯ್ದೆ ಸಂಬಂಧವಾಗಿ ಮಾತನಾಡಿದರು.
ಹಿಂದೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಸುಗ್ರಿವಾಜ್ಞೆ ಮೂಲಕ ರಾಜ್ಯದಲ್ಲಿ ಈ ಕಾಯ್ದೆ ಅನುಷ್ಠಾನಗೊಳಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯ ಸರ್ಕಾರ ಕಾಯ್ದೆಯನ್ನು ಪಾಸ್ ಪಡೆದಿರಲಿಲ್ಲ. ಅಂದು ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ ನಮ್ಮನ್ನು ಕರೆಸಿ ಸುದೀರ್ಘವಾಗಿ ಚರ್ಚೆ ಮಾಡಿದ್ದರ ಪರಿಣಾಮವಾಗಿ ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಭಾವುಟ ಹಿಡಿಯದೇ, ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಕಾರಣ ಸಿದ್ದರಾಮಯ್ಯ ಕೊಟ್ಟ ಮಾತು. ಆದರೆ, ಕಾಂಗ್ರೆಸ್ ಸರ್ಕಾರ ಬಂದು ಇಷ್ಟು ದಿನಗಳು ಕಳೆದರೂ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಅನಗತ್ಯ ಕಾಲಹರಣ ಮಾಡುವ ಮುಖ್ಯಮಂತ್ರಿ ಅಂದು ನೀಡಿದ್ದ ಭರವಸೆ ಈಡೇರಿಸುವ ಧಮ್ ಇದೆಯಾ ಎಂದರು.
ಕೃಷಿ ಕಾಯ್ದೆ ಕಾರ್ಪೊರೇಟರ್ಗೆ ಪೂರಕವಾಗಿದ್ದು, ಕಾಯ್ದೆ ಮುಂದುವರಿದಲ್ಲಿ ಮುಂದಿನ 10 ವರ್ಷಗಳಲ್ಲಿ ಶೇ 75ರಷ್ಟು ರೈತರು ಕೃಷಿ ಬಿಡಬೇಕಾಗುತ್ತದೆ. ಕೃಷಿ, ಮಾರುಕಟ್ಟೆ, ಹೈನುಗಾರಿಕೆ ಕಾರ್ಪೊರೇಟ್ ವ್ಯಾಪ್ತಿಗೆ ಹೋಗಬಾರದು. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ವಾಪಸ್ ಪಡೆಯಲು ಅನಗತ್ಯ ಕಾಲಹರಣ ಮಾಡಿದೆ. ಈಗ ಶುರುವಾಗಿರುವ ಅಧಿವೇಶನದಲ್ಲೂ ಎಪಿಎಂಸಿ ಕಾಯ್ದೆ ಹೊರತಾಗಿ ಕೃಷಿ ಕಾಯ್ದೆ ಬಗ್ಗೆ ಮಾತನಾಡುತ್ತಿಲ್ಲ. ಪದೇ ಪದೆ ಈ ವಿಷಯ ಮುಂದೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮಗೂ ಬಿಜೆಪಿಗೂ ಹೊಂದಾಣಿಕೆ ಇದ್ಯಾ? ಎಂದು ಚಂದ್ರಶೇಖರ್ ಪ್ರಶ್ನಿಸಿದ್ದಾರೆ.