ಕರ್ನಾಟಕ

karnataka

ETV Bharat / state

ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ತೆರೆ.. 9 ದಿನಗಳ ನಂತರ ಗದ್ದುಗೆಯಿಂದ ನಿರ್ಗಮಿಸಿದ ತಾಯಿ ಮಾರಮ್ಮ! - Jatra Mahotsava of Sri Marikamba Devi

ಶಿರಸಿಯ ಮಾರಿಕಾಂಬೆ ಜಾತ್ರೆಯಲ್ಲಿ ಕೋಣನ ಬಲಿ ಕೊಡುವ ಸಂಪ್ರದಾಯ ಕೈಬಿಟ್ಟ ಕಾರಣ ಜಾತ್ರಾ ಚಪ್ಪರದ ಎದುರು ಹೊಂಡ ತೋಡಿ, ಸಾಂಕೇತಿಕವಾಗಿ ಕುಂಬಳಕಾಯಿ ಬಲಿ ಸಮರ್ಪಣೆ ನಡೆಸಿ ಮುಚ್ಚಲಾಯಿತು..

shri-marikamba-devi-jatra
ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ

By

Published : Mar 23, 2022, 5:32 PM IST

ಶಿರಸಿ :ಕಳೆದ ಒಂಬತ್ತು ದಿನಗಳ ಕಾಲ ಅದ್ಧೂರಿಯಿಂದ ನಡೆದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಬುಧವಾರ ಮಧ್ಯಾಹ್ನದ ವೇಳೆ ಸಂಪನ್ನಗೊಂಡಿತು. ದೇವಿಯು ಗದ್ದುಗೆಯಿಂದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ತೆರಳುತ್ತಿದ್ದಂತೆ ಜಾತ್ರೆ ಮುಕ್ತಾಯಗೊಂಡಿತು.

ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶಿರಸಿಯ ಮಾರಿಕಾಂಬೆ ಜಾತ್ರೆಯ ಅಂತಿಮ ದಿನವಾದ ಇಂದು ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ಹರಕೆ ಸೇವೆಗಳು ನಡೆದವು. ನಂತರ ಮಹಾಮಂಗಳಾರತಿ ನಡೆಸುವ ಮೂಲಕ ಸೇವಾಕಾರ್ಯವನ್ನು ಸಂಪನ್ನಗೊಳಿಸಲಾಯಿತು.

ಅದ್ದೂರಿಯಾಗಿ ನಡೆದ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ

11 ಗಂಟೆ ಸುಮಾರಿಗೆ ದೇವಿ ಜಾತ್ರಾ ಗದ್ದುಗೆಯಿಂದ ಮೇಲೆಳುವ ಶಾಸ್ತ್ರ ನಡೆಸಲಾಯಿತು. ನಂತರ ದೇವಸ್ಥಾನದ ಆಡಳಿತ ಮಂಡಳಿಯವರು, ಬಾಬುದಾರರು, ಸಹಾಯಕರೆಲ್ಲ ಸೇರಿ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ತೆರಳಿದರು. ಅಲ್ಲಿ ಕಳೆದ ಒಂಬತ್ತು ದಿನಗಳಿಂದ ಸಂಪ್ರದಾಯದಂತೆ ಕಲಶವಿಟ್ಟು ಪೂಜೆ ಸಲ್ಲಿಸುತ್ತಿರುವ ಗಾಳಿಮಾಸ್ತಿ ಜೋಗತಿಯರು ಇವರಿಗೆಲ್ಲ ಕಂಕಣ ಕಟ್ಟಿದರು.

ಕುಂಬಳಕಾಯಿ ಬಲಿ ಸಮರ್ಪಣೆ :ನಂತರ ವಾದ್ಯತಂಡದೊಂದಿಗೆ ಪೂಜೆ ನಡೆಸಿದ ಕುಂಭವನ್ನು ಮೆರವಣಿಗೆಯಲ್ಲಿ ಗದ್ದುಗೆಗೆ ತರಲಾಯಿತು. ಅದನ್ನು ಗದ್ದುಗೆಗೆ ಕಟ್ಟಿದ ನಂತರ 12ರ ಸುಮಾರಿಗೆ ದೇವಿಯನ್ನು ಗದ್ದುಗೆಯಿಂದ ಜಾತ್ರಾ ಮಂಟಪದ ಮಧ್ಯದಲ್ಲಿರುವ ರಂಗಮಂಟಪದಲ್ಲಿ ತಂದು ಕುಳ್ಳಿರಿಸಲಾಯಿತು.

ಜಾತ್ರೆಯಲ್ಲಿ ಕೋಣನ ಬಲಿ ಕೊಡುವ ಸಂಪ್ರದಾಯ ಕೈಬಿಟ್ಟ ಕಾರಣ ಜಾತ್ರಾ ಚಪ್ಪರದ ಎದುರು ಹೊಂಡ ತೋಡಿ ಸಾಂಕೇತಿಕವಾಗಿ ಕುಂಬಳಕಾಯಿ ಬಲಿ ಸಮರ್ಪಣೆ ನಡೆಸಿ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಜಾತ್ರೆಗೆ ವಾರದ ಮೊದಲು ನಡೆದಿದ್ದ ಅಂಕೆ ಹಾಕುವ, ಕಂಕಣ ಕಟ್ಟುವ ಕಾರ್ಯದ ದಿನದಂದು ದೇವಿಗೆ ಆರತಿ ಮಾಡಿದ ಮೇಟಿ ದೀಪವನ್ನು ಆರದಂತೆ ನೋಡಿಕೊಂಡ ಅಸಾದಿ ಬಸವಣ್ಣಿ ಈ ದೀಪದಿಂದ ಮಾರಿಕಾಂಬೆಗೆ ಮಂಗಳಾರತಿ ನಡೆಸಿದರು. ಹೀಗೆ ಜಾತ್ರೆಯ ಮುಕ್ತಾಯ ವಿಧಿ-ವಿಧಾನಗಳ ನಂತರ 12.30ರ ಸುಮಾರಿಗೆ ದೇವಿಯನ್ನು ಹೊತ್ತುಕೊಂಡು ತೆರಳಲಾಯಿತು.

ಮಾತಂಗಿ ಚಪ್ಪರಕ್ಕೆ ಬೆಂಕಿ :ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚಲಾಯಿತು. ಸಹಸ್ರ ಸಂಖ್ಯೆಯ ಜನರ ನಡುವೆ ಹೊರಟ ಮಾರಿಕಾಂಬೆ ಜಾತ್ರಾ ಮಂಟಪದಿಂದ ಹೊರಬಿದ್ದು, ರಥದ ಬಳಿ ಹೋದ ನಂತರ ರಥವನ್ನು ನೋಡುವ ಭಾಗವಾಗಿ ಮುಖ ತಿರುಗಿ ನಂತರ ಪುನಃ ಮೆರವಣಿಗೆಯಲ್ಲಿ ಹೊತ್ತುಕೊಂಡು ದೇವಿಯನ್ನು ಬನವಾಸಿ ರಸ್ತೆಯ ವಿಸರ್ಜನಾ ಪೀಠಕ್ಕೆ ಕೊಂಡೊಯ್ಯಲಾಯಿತು.

ಓದಿ:ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರ : ಕಾಂಗ್ರೆಸ್ ಸದಸ್ಯರಿಂದ ಧರಣಿ

ABOUT THE AUTHOR

...view details