ಕಾರವಾರ: ನಿತ್ಯ ಜೀವನಕ್ಕಾಗಿ ಕೆಲಸದಲ್ಲಿ ತೊಡಗುವ ಕಾರ್ಮಿಕ ವರ್ಗ ತಮ್ಮ ಆರೋಗ್ಯದತ್ತ ಗಮಹರಿಸದ ಪರಿಣಾಮ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಇದನ್ನ ಅರಿತ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಈ ಸಮಸ್ಯೆಗೆ ಪರಿಹಾರವಾಗಿ ಶ್ರಮಿಕ ಸಂಜೀವಿನಿ ಎನ್ನುವ ಯೋಜನೆಯನ್ನ ರೂಪಿಸಿ ಜಾರಿಗೊಳಿಸಿದ್ದು, ಕಾರ್ಮಿಕರ ಮನೆ ಬಾಗಿಲಿಗೇ ಆರೋಗ್ಯ ಸೇವೆಯನ್ನ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಕಾರ್ಮಿಕರಿಂದ ಈ ಮೊಬೈಲ್ ಕ್ಲಿನಿಕ್ ಸೇವೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಂದೆಡೆ ಗ್ರಾಮೀಣ ಪ್ರದೇಶಕ್ಕೆ ಆಗಮಿಸಿದ ಸುಸಜ್ಜಿತ ಆ್ಯಂಬುಲೆನ್ಸ್. ಇನ್ನೊಂದೆಡೆ ಆರೋಗ್ಯ ತಪಾಸಣೆಗೆ ಸಾಲುಗಟ್ಟಿ ನಿಂತ ಪುರುಷರು ಮತ್ತು ಮಹಿಳಾ ಕಾರ್ಮಿಕರು. ಮತ್ತೊಂದೆಡೆ ಆ್ಯಂಬುಲೆನ್ಸ್ನಲ್ಲೇ ಈಸಿಜಿಯಂತಹ ಅತ್ಯಾಧುನಿಕ ತಪಾಸಣೆ ಕೈಗೊಳ್ಳುತ್ತಿರುವ ವೈದ್ಯ ಸಿಬ್ಬಂದಿ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾವಳ್ಳಿ ಗ್ರಾಮದಲ್ಲಿ.
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಮಹತ್ವಾಕಾಂಕ್ಷಿ ಶ್ರಮಿಕ ಸಂಜೀವಿನಿ ಯೋಜನೆಯಡಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಆ್ಯಂಬುಲೆನ್ಸ್ಗಳನ್ನ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರುಗಳಿಗಾಗಿ ನೀಡಿದ್ದು ಇದೀಗ ಸೇವೆಯನ್ನ ಪ್ರಾರಂಭಿಸಿವೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರ ಸ್ವಾಸ್ಥ್ಯಕ್ಕೆ ಒತ್ತು ನೀಡುವ ಉದ್ದೇಶದಿಂದ ಶ್ರಮಿಕ ಸಂಜೀವಿನಿ ಯೋಜನೆ ರೂಪಿಸಲಾಗಿದೆ.
ನೋಂದಾಯಿತರಿಗೆ ಆರೋಗ್ಯ ತಪಾಸಣೆ:ನೋಂದಾಯಿತ ಕಾರ್ಮಿಕರು ಇರುವಲ್ಲಿಗೆ ತೆರಳಿ ಅವರ ಆರೋಗ್ಯ ತಪಾಸಣೆ ಜೊತೆಗೆ ಅಗತ್ಯ ಸಲಹೆ ಸೂಚನೆಗಳನ್ನ ನೀಡಲಾಗುತ್ತದೆ. ಅತ್ಯಾಧುನಿಕ ಸೌಲಭ್ಯವನ್ನ ಒಳಗೊಂಡಿರುವ ಈ ಸಂಚಾರಿ ಕ್ಲಿನಿಕ್‌ಗಳು ವಾರದಲ್ಲಿ ಆರು ದಿನಗಳ ಕಾಲ ನಿಗದಿತ ಅವಧಿಯಲ್ಲಿ ದಿನಕ್ಕೆರಡು ಗ್ರಾಮಗಳಲ್ಲಿ ಓಡಾಟ ನಡೆಸುತ್ತಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ಸೇವೆಯನ್ನ ಅವರಿದ್ದಲ್ಲಿಯೇ ತೆರಳಿ ನೀಡಲಾಗುತ್ತಿದೆ. ಪ್ರಯೋಗಾಲಯ ಸಲಕರಣೆಗಳು, ಈಸಿಜಿ ಸೇರಿದಂತೆ ಅವಶ್ಯಕ ವೈದ್ಯಕೀಯ ಪರಿಕರಗಳನ್ನ ಹೊಂದಿರುವ ಈ ಸಂಚಾರಿ ಕ್ಲಿನಿಕ್‌ನ್ನ ಶಿರಸಿಯ ಸ್ಕೊಡ್‌ವೇಸ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.