ಶಿರಸಿ:ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯ ಭಾಗವಾಗಿ ಭಾರತ ಮಾಲಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಶಿರಸಿ - ಕುಮಟಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಗೆ ಪರಿಸರವಾದಿಗಳು ತೀವ್ರವಾಗಿ ಅಡ್ಡಗಾಲಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ಜನತೆ ಪರಿಸರವಾದಿಗಳ ವಿರುದ್ಧ ಫೆ. 27ರಂದು ರಸ್ತೆ ತಡೆದು ಪ್ರತಿಭಟಿಸಲು ಸಜ್ಜಾಗುತ್ತಿದ್ದಾರೆ.
ಆರಂಭದಿಂದಲೂ ಒಂದೊಂದೇ ವಿಘ್ನ ಕಾಣುತ್ತಿರುವ ಶಿರಸಿ - ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಎಲ್ಲವನ್ನೂ ಮೀರಿ ಕಳೆದ 10 ದಿನಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಅರಣ್ಯ ಇಲಾಖೆಯವರು ಮರಗಳನ್ನು ಕಡಿಯುವ ಕೆಲಸದಲ್ಲಿ ನಿರತರಾಗಿದ್ದರು. ಸುಮಾರು 9 ಸಾವಿರ ಮರಗಳನ್ನು ಗುರುತಿಸಲಾಗಿತ್ತು. ಆದರೆ ಬೆಂಗಳೂರು ಮೂಲದ ಎನ್ಜಿಒ ಒಂದು ಪರಿಸರದ ನೆಪ ಇಟ್ಟುಕೊಂಡು ಕಾಮಗಾರಿ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ಅದನ್ನೇ ನೆಪ ಮಾಡಿಕೊಂಡು ಅರಣ್ಯ ಇಲಾಖೆ ಮರಗಳನ್ನು ಕಡಿಯುವುದನ್ನು ನಿಲ್ಲಿಸಿದೆ.