ಮಾಜಿ ಸಚಿವ ಹಾಲಿ ಶಾಸಕ ಆರ್. ವಿ. ದೇಶಪಾಂಡೆ ಕಾರವಾರ(ಉತ್ತರ ಕನ್ನಡ) : ಮುಖ್ಯಮಂತ್ರಿ ಆಗುವ ಆಸೆ ಇದ್ದರೇ ತಪ್ಪಲ್ಲ. ಅದು ಶಿಸ್ತುಬದ್ಧವಾಗಿ ಆಗಬೇಕಾಗಿರುವಂತದ್ದು, ಆದರೆ ಈ ಸಮಯದಲ್ಲಿ ಇದರ ಚರ್ಚೆ ಪ್ರಸ್ತುತವಲ್ಲ ಎಂದು ಮಾಜಿ ಸಚಿವ ಹಾಲಿ ಶಾಸಕ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.
ಕಾರವಾರದ ಹಳಿಯಾಳದಲ್ಲಿ ಮಾತನಾಡಿದ ಅವರು, ಮಾಧ್ಯಮದವರು ಎಂ. ಬಿ ಪಾಟೀಲ್ ಮುಖ್ಯಮಂತ್ರಿ ರೇಸ್ನಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿರುವುದರ ಬಗ್ಗೆ ಕೇಳಿದಾಗ, ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಇದೀಗ ಚರ್ಚೆ ಮಾಡುವುದು ಸರಿಯಲ್ಲ. ಇದರ ನಿರ್ಣಯ ಇಂದು ಮಾಡಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಕಚೇರಿಯಲ್ಲಿ ಶೆಟ್ಟರ್.. ಇನ್ನೂ 67 ಜನ ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಡಿಕೆಶಿ
ಮುಂದುವರೆದು, ಚುನಾವಣೆಯಾದ ಬಳಿಕವೇ ಶಾಸಕಾಂಗದಲ್ಲಿ ನಿರ್ಣಯವಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇರುತ್ತದೆ. ಅದೆ ರೀತಿ ನನಗೂ ಕೂಡ ಇದ್ದರೇ ತಪ್ಪೇನು? ಆದರೆ ಅದು ಚುನಾವಣೆ ಬಳಿಕ ಶಿಸ್ತಿನಿಂದ ಆಗಬೇಕಾದ ಪ್ರಕ್ರಿಯೆ. ಇದರ ಬಗ್ಗೆ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಶಾರದಾ ಶೆಟ್ಟಿ ಟಿಕೆಟ್ ಕೈತಪ್ಪಿ ಅಸಮಾಧಾನಗೊಂಡಿರುವ ಬಗ್ಗೆ ಕೇಳಿದಾಗ ಶಾರದಾ ಶೆಟ್ಟಿ ಒಳ್ಳೆಯವರಿದ್ದಾರೆ. ಆದರೆ ನಾನು ಹೈಕಮಾಂಡ್ ಜೊತೆ ಏನು ಚರ್ಚೆ ಮಾಡಿದ್ದೇನೆ ಅದು ನನಗೆ ಮತ್ತು ಹೈಕಮಾಂಡ್ಗೆ ಮಾತ್ರ ಗೊತ್ತಿದೆ. ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ. ಆದರೆ ಇದೀಗ ಪಕ್ಷದಲ್ಲಿರುವ ಶಿಸ್ತಿನಂತೆ ಎಲ್ಲರು ನಡೆದುಕೊಳ್ಳಬೇಕಾಗುತ್ತದೆ. ಇದು ಹೈಕಮಾಂಡ್ ಮಾಡಿರುವ ನಿರ್ಧಾರವಾಗಿದೆ.
ಇದಕ್ಕೂ ಹೆಚ್ಚಿನದಾಗಿ ಏನು ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ ಆಗಿ ಬದ್ಧನಾಗಿದ್ದೇನೆ. ಹಳಿಯಾಳ ಕ್ಷೇತ್ರದಲ್ಲಿ ನನಗೆ ಸಂಪೂರ್ಣ ವಿಶ್ವಾಸ ಇದೆ. ಮತದಾರರ ಪ್ರೀತಿಯೇ ನನ್ನ ವಿಶ್ವಾಸಕ್ಕೆ ಮುಖ್ಯ ಕಾರಣವಾಗಿದ್ದು ಮುಂದೆಯೂ ಈ ಮತದಾರರ ಪ್ರೀತಿ ಬಗ್ಗೆ ನಂಬಿಕೆ ಇದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ತಮ್ಮದೇ ಛಾಪು, ಮೂಡಿಸಿರುವ ಪಾಟೀಲ್: ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಕೆರಳಿಸಲಿದೆ. ಈ ಮತ ಕ್ಷೆತ್ರದಲ್ಲಿ ಚುನಾವಣೆ ಜೋರಾಗಿಯೇ ಇದೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಬಿ ಪಾಟೀಲ್ ಇಲ್ಲಿಂದಲೇ ಸ್ಪರ್ಧೆ ಮಾಡಲಿದ್ದು ಉಳಿದ ಪಕ್ಷದ ಅಭ್ಯರ್ಥಿಗಳಿಗೆ ಇವರು ಟೈಟ್ ಫೈಟ್ ನೀಡಲಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ರೇಸ್ನಲ್ಲಿಯೂ ಪ್ರಭಾವಿ ನಾಯಕನಾಗಿರುವ ಪಾಟೀಲ್ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿ ಕ್ಷೇತ್ರದ ಜನರ ಮನಸ್ಸನ್ನು ಈಗಾಗಲೇ ಗೆದ್ದಿದ್ದಾರೆ.
ಇವರು ತಮ್ಮ ಕಾರ್ಯಕ್ಷಮತೆಯಿಂದ 2018 ರ ಚುನಾವಣೆಯಲ್ಲೇ ಪ್ರಭಾವಿಗಳ ವಿರೋಧ, ಸ್ವಪಕ್ಷೀಯರ ಕುತಂತ್ರ ಹಾಗು ಪ್ರಧಾನಿ ಮೋದಿಯಾದಿಯಾಗಿ ಘಟಾನುಘಟಿಗಳ ಅಬ್ಬರದ ನಡುವೆಯೂ ಪಾಟೀಲರು 29 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಗೆದ್ದು ಬೀಗಿದ್ದರು. ಹೀಗಾಗಿ ಈ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು, ಈ ಬಾರಿಯೂ ಕ್ಷೇತ್ರದ ಹಿಡಿತ ಸಾಧಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್.. 150 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಖರ್ಗೆ