ಕಾರವಾರ:ಆಡಿ ಬೆಳೆಯಬೇಕಾದ ನಾಲ್ಕು ವರ್ಷದ ಕಂದಮ್ಮಗೆ ಮಹಾಮಾರಿ ಕ್ಯಾನ್ಸರ್ ಬಾಧಿಸಿದ್ದು ಮಗುವಿನ ಚಿಕಿತ್ಸೆ ವೆಚ್ಚ ಭರಿಸಲಾಗದೆ ಬಡ ತಂದೆ-ತಾಯಿ ಇದೀಗ ಸಹೃದಯಿಗಳ ಮೊರೆ ಹೋಗಿದ್ದಾರೆ. ಹಾಸಿಗೆ ಹಿಡಿದ ಮಗನ ಜೀವ ಉಳಿಸಲು ಕೈಲಾದ ಸಹಕಾರ ಮಾಡುವಂತೆ ಬೊಗಸೆ ಒಡ್ಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರದ ದುರ್ಗಾದಾಸ ಮತ್ತು ಪಲ್ಲವಿ ದಂಪತಿಯ ನಾಲ್ಕು ವರ್ಷದ ಮಗ ಸೂರ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾನೆ. ಮಗನ ಅನಾರೊಗ್ಯದ ಬಗ್ಗೆ ಹಲವು ವೈದ್ಯರ ಬಳಿ ತೋರಿಸಿದಾಗ ಕೊನೆಗೆ ಕ್ಯಾನ್ಸರ್ ಎಂದು ಉತ್ತರ ಬಂದಿದ್ದು, ಆಡಿ ಬೆಳೆಯಬೇಕಾದ ಮಗನಿಗೆ ಇಂತಹ ಸ್ಥಿತಿ ಕಂಡು ತಂದೆ-ತಾಯಿ ಆಘಾತಕ್ಕೊಳಗಾಗಿದ್ದಾರೆ.
ಮಗನನ್ನು ಉಳಿಸಿಕೊಳ್ಳಲೇಬೇಕು ಎಂದು ದೂರದೂರಿಂದ ಬಂದಿರುವ ಈ ಕುಟುಂಬ ಇದೀಗ ಬೆಂಗಳೂರಿನ BCG ಆಸ್ಪತ್ರೆಯಲ್ಲಿ ತಮ್ಮ ಮಗುವನ್ನು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಗಲುವ ಖರ್ಚಿನ ಪ್ರತಿಯನ್ನು ಆಸ್ಪತ್ರೆ ಸಿಬ್ಬಂದಿ ತಂದೆ-ತಾಯಿಗೆ ನೀಡಿದ್ದು ಬರೋಬ್ಬರಿ 15 ರಿಂದ 20 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಬಡ ಕುಟುಂಬವಾದ ಸೂರ್ಯನ ತಂದೆ-ತಾಯಿ ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದು, ಇಷ್ಟೊಂದು ಹಣ ಹೊಂದಿಸಲು ಅಸಹಾಯಕರಾಗಿದ್ದಾರೆ.