ಕಾರವಾರ: ಕದಂಬ ನೌಕಾನೆಲೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದು. ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿ ತಲೆ ಎತ್ತಿದ ಈ ಯೋಜನೆ ನಿರ್ಮಾಣಕ್ಕೆ ಸಾವಿರಾರು ಜನರು ತಮ್ಮ ಭೂಮಿಯನ್ನು ನೀಡಿದ್ದರು. ಹತ್ತಾರು ಗ್ರಾಮಗಳು ಯೋಜನೆ ವ್ಯಾಪ್ತಿಗೆ ಒಳಪಟ್ಟ ಕಾರಣ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು.
ಆದರೆ, ಕದಂಬ ನೌಕಾನೆಲೆ ಸ್ಥಾಪನೆಗೆ ಭೂಮಿ ನೀಡಿದ್ದ ಸುಮಾರು 400 ಕುಟುಂಬಗಳಿಗೆ ಇಂದಿಗೂ ಸರಿಯಾದ ಪರಿಹಾರ ಬಂದಿಲ್ಲ. ಒಂದೆಡೆ, ಸೂಕ್ತ ಪರಿಹಾರ ಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಇನ್ನೊಂದೆಡೆ, ಯೋಜನೆಗೆ ಭೂಮಿ ನೀಡಿದವರಿಗೆ ಪರಿಹಾರ ಕೊಡಲು ಮಂಜೂರಾಗಿದ್ದ ಹಣವನ್ನ ಪಡೆಯಲು ನಿತ್ಯ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಇಂದಿಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಯೋಜನೆ ಪ್ರಾರಂಭದ ವೇಳೆ ಭೂಮಿ ನೀಡಿದವರಿಗೆ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಅಲ್ಲದೇ, ಸೂಕ್ತ ಪರಿಹಾರ ಕೊಡುವುದಾಗಿಯೂ ಹೇಳಿದ್ದರು. ಸದ್ಯ ಉದ್ಯೋಗವೂ ಇಲ್ಲದೇ, ಪರಿಹಾರವೂ ಸಿಗದೇ ಜನ ಪರದಾಟ ನಡೆಸುತ್ತಿದ್ದು ಸರ್ಕಾರದ ನಡೆಗೆ ಕಿಡಿಕಾರುತ್ತಿದ್ದಾರೆ.
'ನೌಕಾನೆಲೆ ಆರಂಭದಲ್ಲಿ ಮನೆಗೊಂದು ಉದ್ಯೋಗ, ಸೂಕ್ತ ಪರಿಹಾರ ಮೊತ್ತ ನೀಡುವ ಭರವಸೆ ನೀಡಿದ್ದರು. ಆದರೆ ಯಾವುದನ್ನೂ ಸರಿಯಾಗಿ ನೀಡಿಲ್ಲ. ಇವರ ಮಾತು ನಂಬಿ ಸಾಲಮಾಡಿಕೊಂಡಿದ್ದು, ಇದೀಗ ಬಡ್ಡಿ ತೀರಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ, ಪರಿಹಾರದ ಹಣ ಬರುವುದಾಗಿ ನಂಬಿದ್ದ ತಾಯಿ, ನಾಲ್ವರು ಅಣ್ಣಂದಿರು ಸಾವನ್ನಪ್ಪಿದ್ದಾರೆ. ನಮಗೂ ಸಾಕಷ್ಟು ಅನಾರೋಗ್ಯ ಸಮಸ್ಯೆ ಇದ್ದು, ಪರಿಹಾರಕ್ಕಾಗಿ ಕಾಯುತ್ತಿದ್ದೇವೆ. ಸರ್ಕಾರ ಕೂಡ ಹೆಚ್ಚುವರಿ ಪರಿಹಾರವನ್ನು ನೀಡಬೇಕು' ಎಂದು ನಿರಾಶ್ರಿತರಾದ ವಾಣಿ ಗಣಪತಿ ನಾಯ್ಕ ಆಗ್ರಹಿಸಿದ್ದಾರೆ.