ಕರ್ನಾಟಕ

karnataka

ETV Bharat / state

ಕಾರವಾರ: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ವಿದ್ಯಾರ್ಥಿ ಬಂಧನ

ಬೀಚ್​ಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಕೊಪ್ಪಳ ಮೂಲದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ
ಅಪ್ರಾಪ್ತೆ ಮೇಲೆ ಅತ್ಯಾಚಾರ

By

Published : Mar 22, 2023, 11:54 AM IST

ಕಾರವಾರ: 16 ವರ್ಷದ ಬಾಲಕಿಯ ಮೇಲೆ ಡಿಪ್ಲೊಮಾ ವಿದ್ಯಾರ್ಥಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಆರೋಪಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನವನು. ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ಈತ ಕಳೆದ ಜನವರಿ ತಿಂಗಳಿನಲ್ಲಿ ಅಂಕೋಲಾಕ್ಕೆ ಬಂದಿದ್ದಾಗ ಬಾಲಕಿಯನ್ನು ನದಿಬಾಗ ಬೀಚ್‌ಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಎಸಗಿದ್ದ ಎಂದು ದೂರು ದಾಖಲಾಗಿದೆ.

ಕೊಲೆ ಪ್ರಕರಣದ ಅಪರಾಧಿಗೆ ಶಿಕ್ಷೆ: ಜಮೀನು ಹಂಚಿಕೆ ಸಂಬಂಧ ವ್ಯಕ್ತಿಯೋರ್ವನನ್ನು ಕೊಂದು ಅವರ ಪತ್ನಿಗೂ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ. ಹೊನ್ನಾವರದ ಉಮೇಶ ಲಕ್ಷ್ಮಣ ನಾಯ್ಕ ಶಿಕ್ಷೆಗೊಳಾದ ವ್ಯಕ್ತಿ.

ಈತ ಹಾಗೂ ಮಹಾಬಲೇಶ್ವರ ನಾಯ್ಕ ಎಂಬವರ ನಡುವೆ ಜಮೀನು ವ್ಯಾಜ್ಯ ನಡೆಯುತಿತ್ತು. 2018 ಆಗಸ್ಟ್ 20 ರಂದು ಉಮೇಶ ನಾಯ್ಕ, ಮಹಾಬಲೇಶ್ವರನೊಂದಿಗೆ ಜಗಳ ತೆಗೆದು ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಗಂಡನನ್ನು ಬಿಡಿಸಲು ಬಂದ ಮಹಾಬಲೇಶ್ವರ ಅವರ ಪತ್ನಿ ರಮಾ ನಾಯ್ಕ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು ಆರೋಪ ಸಾಬಿತಾದ ಹಿನ್ನೆಲೆಯಲ್ಲಿ ಐಪಿಸಿ ಕಲಂ 302ರಡಿ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಬಿ.ಹೊಸಪಟ್ಟಣ ವಾದ ಮಂಡಿಸಿದ್ದರು.

ಅಕ್ರಮ ಮದ್ಯ ಮಾರಾಟ ಓರ್ವನ ವಶ

ಮದ್ಯಸಹಿತ ಓರ್ವ ವಶಕ್ಕೆ:ಮಿನಿ ಟ್ರಕ್ ವಾಹನದಲ್ಲಿ 5 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಜೋಯಿಡಾದ ಅನಮೋಡ್ ಅಬಕಾರಿ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತ್‌ನ ಜುನಾಗಢ ಮೂಲದ ಆರೋಪಿ ಫಿರೋಜ್ ಹಾಜಿಭಾಯಿ ಬ್ಲೋಚ್ ಬಂಧಿತ. ಗೋವಾದಿಂದ ಗುಜರಾತ್ ನೋಂದಣಿಯ ಸರಕು ಸಾಗಣೆ ವಾಹನದಲ್ಲಿ ಅಕ್ರಮವಾಗಿ 158.4 ಲೀಟರ್ ಗೋವಾ ಮದ್ಯ ಸಾಗಾಟ ಮಾಡುತ್ತಿರುವುದು ವಾಹನ ತಪಾಸಣೆ ವೇಳೆ ಪತ್ತೆಯಾಗಿದೆ. ಪೊಲೀಸರು ಒಟ್ಟು 5,64,800 ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ. ಜೋಯಿಡಾದ ಅನಮೋಡ್ ಅಬಕಾರಿ ತನಿಖಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲಂಕಾರ ಸಾಮಗ್ರಿಗೆ ಬೆಂಕಿ

ಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ:ಹೊನ್ನಾವರದ ತಾಲೂಕಿನ ಕಡ್ಲೆಯಲ್ಲಿರುವ ರಂಗನಟ ದಾಮೋದರ ನಾಯ್ಕ (ದಾಮು) ಅವರ ರಂಗಭೂಮಿಕಾ ಅಲಂಕಾರ ಸಾಮಗ್ರಿಗಳಿಗೆ ಆಕಸ್ಮಾತ್ ಬೆಂಕಿ ತಗುಲಿ ಸಾಮಗ್ರಿಗಳು ಪೂರ್ತಿ ಸುಟ್ಟು ಕರಕಲಾಗಿವೆ. ಜಿಲ್ಲೆ ಮಾತ್ರವಲ್ಲದೇ ಹಂಪಿ ಉತ್ಸವ ಮೊದಲಾದ ಕಡೆ ಸಭಾ ವೇದಿಕೆ ಮತ್ತು ಸಭಾಗೃಹದ ಅಲಂಕಾರಕ್ಕೆ ಫೈಬರ್‌ನಿಂದ ತಯಾರಿಸಿದ ಅರಮನೆ, ಕಂಬಗಳು, ಆನೆ, ಮೊದಲಾದವುಗಳನ್ನು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಬಳಸಿ ಸುಂದರ ವೇದಿಕೆ ಸಿದ್ಧಪಡಿಸುತ್ತಿದ್ದ ದಾಮೋದರ ನಾಯ್ಕ 10-15 ಜನರಿಗೆ ಕೆಲಸ ಕೊಟ್ಟಿದ್ದರು. ಆದಾಯ ತರುವ ಈ ಸೀಸನ್‌ನಲ್ಲಿ ತನ್ನ ದುಡಿಮೆಯ ಉಳಿತಾಯದ ಬಂಡವಾಳವೆಲ್ಲ ಬೆಂಕಿಗಾಹುತಿಯಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದ ಮೇರೆಗೆ ಬೆಂಕಿ ನಂದಿಸಿದ್ದರೂ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ.

ಇದನ್ನೂ ಓದಿ:ಚಾಮರಾಜನಗರ ಪೊಲೀಸರ ಭರ್ಜರಿ ಬೇಟೆ.. ಅಕ್ರಮವಾಗಿ ಸಾಗಿಸುತ್ತಿದ್ದ 45 ಲಕ್ಷ ರೂ. ವಶಕ್ಕೆ

ABOUT THE AUTHOR

...view details