ಕಾರವಾರ: ಕಾರವಾರ-ಬೆಂಗಳೂರು ರೈಲ್ವೆ ಸಂಚಾರ ಸಮಯದಲ್ಲಿ ವಿಳಂಬ, ಸಮಯ ಬದಲಾವಣೆ ಖಂಡಿಸಿ ಮತ್ತು ರೈಲ್ವೆ ಉದ್ಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾರವಾರದಲ್ಲಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಕರವೇ ಕಾರ್ಯಕರ್ತರ ಪ್ರತಿಭಟನೆ ಕರವೇ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ಕೊಂಕಣ ರೈಲ್ವೆ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಮುಂದಾದಾಗ ಪೊಲೀಸರು ತಡೆದರು. ಬಳಿಕ ರೈಲ್ವೆ ನಿಲ್ದಾಣದ ಎದುರು ಕುಳಿತು ಪ್ರತಿಭಟನೆ ನಡೆಸಿದರು.
ಕೊಂಕಣ ರೈಲ್ವೆಯಲ್ಲಿ ಸಣ್ಣ ಯೋಜನೆ ಕಾರ್ಯಗತವಾಗಬೇಕಾದರೂ ಹೋರಾಟದ ಮೂಲಕವೇ ಪಡೆಯಬೇಕಾದ ಅನಿವಾರ್ಯತೆ ಕನ್ನಡಿಗರಿಗೆ ಎದುರಾಗಿದೆ. ಕಳೆದ ಹಲವು ದಶಕಗಳ ಹೋರಾಟದ ಫಲವಾಗಿ ಕೆಲ ವರ್ಷಗಳ ಹಿಂದೆ ಬೆಂಗಳೂರು-ಕಾರವಾರ ರೈಲ್ವೆ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ ಇದೀಗ ರೈಲಿನ ಸಮಯವನ್ನು ಬದಲಿಸಿ ತಡವಾಗಿ ಬೆಂಗಳೂರು ತಲುಪುವಂತೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈಲಿನ ಸಮಯವನ್ನು ಬದಲಿಸದೆ ಈ ಹಿಂದಿನಂತೆ ವೇಗವಾಗಿ ತಲುಪಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇನ್ನು ಕಾರವಾರ ರೈಲ್ವೆ ನಿಲ್ದಾಣವನ್ನು ಟರ್ಮಿನಲ್ ನಿಲ್ದಾಣವಾಗಿ ಬದಲಾಯಿಸಿ ನಿರ್ವಹಣಾ ಘಟಕ ಸ್ಥಾಪಿಸಬೇಕು. ಕೊಂಕಣ ರೈಲ್ವೆಗಾಗಿ ಸರ್ವಸ್ವವನ್ನು ಕಳೆದುಕೊಂಡವರಿಗೆ ಈವರೆಗೂ ಸೂಕ್ತ ಪರಿಹಾರ, ಉದ್ಯೋಗ ನೀಡಿಲ್ಲ. ಕೆಲವರಿಗೆ ನೀಡಿದರೂ ಡಿ ದರ್ಜೆ ಹುದ್ದೆ ನೀಡಲಾಗುತ್ತಿದೆ. ಕೂಡಲೇ ಅವರ ವಿದ್ಯಾರ್ಹತೆಗೆ ತಕ್ಕ ಕೆಲಸ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.