ಕಾರವಾರ(ಉತ್ತರ ಕನ್ನಡ): ಕಳೆದ ಐದು ವರ್ಷಗಳ ಹಿಂದೆ ಹೊನ್ನಾವರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪರೇಶ್ ಮೇಸ್ತ ಹತ್ಯೆ ಪ್ರಕರಣದ ತನಿಖಾ ವರದಿಯನ್ನು ಸಿಬಿಐ, ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪರೇಶ್ ಮೇಸ್ತಾ ಹತ್ಯೆ ನಡೆದಿರುವ ಬಗ್ಗೆ ಯಾವುದೇ ಸಾಕ್ಷಾಧಾರ ಇಲ್ಲ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವೈದ್ಯಕೀಯ ವರದಿಗಳು ದೃಢಪಡಿಸಿವೆ ಎಂದು ವರದಿಯಲ್ಲಿ ತಿಳಿಸಿದೆ.
2017 ರ ಡಿಸೆಂಬರ್ 6 ರಂದು ಹೊನ್ನಾವರ ಪಟ್ಟಣದಲ್ಲಿ ನಡೆದ ಗಲಭೆ ವೇಳೆ ಮೀನುಗಾರ ಯುವಕ ಪರೇಶ ಮೆಸ್ತಾ ಕಾಣೆಯಾಗಿದ್ದರು. ಬಳಿಕ ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿದೇವಸ್ಥಾನದ ಹಿಂಬದಿ ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಶವ ಪತ್ತೆಯಾಗಿತ್ತು. ಆದರೆ ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದರು.
ಅಲ್ಲದೆ ಅದೇ ವೇಳೆ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಸೂಚಿಸಿದ್ದರು. ಆದರೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಪ್ರಕರಣ ಸಿಬಿಐಗೆ ನೀಡುವಂತೆ ಬೃಹತ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರ ಸಿಬಿಐಗೆ ನೀಡಿತ್ತು.
ಸಿಬಿಐ ವರದಿಗೆ ಪರೇಶ್ ತಂದೆ ಅಸಮಾಧಾನ ಅದರಂತೆ ಕಳೆದ ಐದು ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ, ಐದು ಜನರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಇದೀಗ ನಾಲ್ಕುವರೆ ತಿಂಗಳ ಬಳಿಕ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಪರೇಶ್ ಮೇಸ್ತಾ ಹತ್ಯೆ ಆರೋಪ ಸಾಬಿತುಪಡಿಸಲು ಯಾವುದೇ ಸಾಕ್ಷ್ಯಾದಾರಗಳು ಲಭ್ಯವಾಗಿಲ್ಲ. ಅದೊಂದು ಆಕಸ್ಮಿಕ ಸಾವು. ವೈದ್ಯಕೀಯ ವರದಿಗಳ ಪ್ರಕಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ ಎಂದು ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಇನ್ನು ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವಂಬರ್ 16 ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.
ಸಿಬಿಐ ವರದಿಗೆ ಕಮಲಾಕರ ಮೇಸ್ತಾ ಅಸಮಾಧಾನ: ಇನ್ನು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ ಕುರಿತು ಪರೇಶ್ ಮೇಸ್ತಾ ತಂದೆ ಕಮಾಲಕರ್ ಮೇಸ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬಿಐ ನವರು ಆಕಸ್ಮಿಕ ಸಾವು ಎಂದು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಆದರೆ ನನ್ನ ಮಗನ ಹತ್ಯೆಯಾಗಿದೆ. ಈ ಹಿಂದಿನ ಸರ್ಕಾರ ನಮಗೆ ಸಹಕಾರ ನೀಡಿಲ್ಲ. ಪೊಲೀಸರು ಎಲ್ಲರನ್ನೂ ವಿಚಾರಣೆ ನಡೆಸಿಲ್ಲ. ಎಲ್ಲ ಸಾಕ್ಷ್ಯ ನಾಶವಾದ ಬಳಿಕ ಸರ್ಕಾರ ಸಿಬಿಐಗೆ ವಹಿಸಿತ್ತು. ನಾವು ಮುಂದಿನ ನಡೆ ಬಗ್ಗೆ ಎಲ್ಲರೊಂದಿಗೂ ಚರ್ಚಿಸಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಸತೀಶ್ ಸೈಲ್, ಪರೇಶ್ ಮೇಸ್ತ ಸಾವು ಸಂಭವಿಸಿದಾಗ ಬಿಜೆಪಿ ನಅಯಕರು ಇದೊಂದು ಹತ್ಯೆ ಎಂದು ಕರಾವಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಜಿಲ್ಲೆಯಲ್ಲಿ ದೊಡ್ಡ ಗಲಭೆ ಉಂಟಾಗಿತ್ತು. ಆದರೆ ಇದೊಂದು ಆಕಸ್ಮಿಕ ಸಾವು ಎಂದು ಇದೀಗ ಸಿಬಿಐ ವರದಿ ನೀಡಿದೆ. ಪರೇಶ್ ಮೇಸ್ತ ಸಾವನ್ನು ಹತ್ಯೆ ಎಂದು ಬಳಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜಕಾರಣವನ್ನು ಅಭಿವೃದ್ಧಿಗಾಗಿ ಮಾಡಬೇಕೆ ವಿನಃ ಈ ರೀತಿ ಕೋಮುಗಲಭೆ ಸೃಷ್ಟಿಸಲು ಮಾಡಬಾರದು. ಬಿಜೆಪಿಯ ಮುಖವಾಡ ಇದೀಗ ಜನರಿಗೆ ತಿಳಿದಿದೆ. ಜನರು ಮುಂದಿನ ಚುಬಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ಓದಿ: ಉತ್ತರಕನ್ನಡ ಗಲಭೆ ಪ್ರಕರಣದ ಕೇಸ್ಗಳು ವಾಪಸ್; ನಿಟ್ಟುಸಿರು ಬಿಟ್ಟ ಸಾವಿರಾರು ಯುವಕರು)