ಕಾರವಾರ(ಉ.ಕ): ಕೊರೊನಾ ಆತಂಕದಿಂದಾಗಿ ಶಾಲಾ-ಕಾಲೇಜುಗಳ ಆರಂಭ ಗೊಂದಲಮಯವಾಗಿದೆ. ಈ ಕುರಿತು ಸರ್ಕಾರದಿಂದಲೂ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆದರೆ ಕಾರವಾರದಲ್ಲಿ ಖಾಸಗಿ ಶಾಲೆಯೊಂದು ಅಡ್ಮಿಷನ್ ಓಪನ್ ಮಾಡಿದ್ದು, ಏಕಾಏಕಿ ಸಾವಿರಾರು ರೂಪಾಯಿ ಹಣಕಟ್ಟುವಂತೆ ಪಾಲಕರಿಗೆ ದುಂಬಾಲು ಬಿದ್ದಿರುವ ಆರೋಪ ಕೇಳಿಬಂದಿದೆ.
1ನೇ ತರಗತಿಗೆ 18 ಸಾವಿರ ಕಟ್ಟುವಂತೆ ಪಾಲಕರಿಗೆ ಆದೇಶ ಆರೋಪ ಕಾರವಾರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಜೂನ್ 8ರಂದು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳಿಗೆ ಅಡ್ಮಿಷನ್ ಮಾಡಿಕೊಳ್ಳಲಾಗುತ್ತಿದೆ. ಶಾಲಾ ಸಿಬ್ಬಂದಿ ಕಳೆದೆರಡು ದಿನಗಳಿಂದ ಪಾಲಕರಿಗೆ ಕರೆ ಮಾಡಿ ಈಗಲೇ ಮಕ್ಕಳ ದಾಖಲಾತಿ ಮಾಡುವಂತೆ ಸೂಚಿಸುತ್ತಿದ್ದು, ತಡವಾದರೇ ಸೀಟ್ ಸಿಗುವುದಿಲ್ಲ ಎಂದು ಹೆದರಿಸುತ್ತಿದ್ದಾರೆ ಎಂದು ಕೆಲ ಪಾಲಕರು ಆರೋಪಿಸಿದ್ದಾರೆ. ಈ ಸಂಬಂಧ ಡಿಡಿಪಿಐ ಕಚೇರಿಗೆ ತೆರಳಿ ಮೌಖಿಕ ದೂರನ್ನು ಸಹ ಸಲ್ಲಿಸಿದ್ದಾರೆ.
ಶಾಲೆ ಪ್ರಾರಂಭದ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಹೊರಬಿದ್ದಿಲ್ಲ. ಆದರೆ ಶಾಲಾ ಆಡಳಿತ ಮಂಡಳಿಯವರು ಫೋನ್ ಮಾಡಿ ಒಂದನೇ ತರಗತಿಯ 30 ಮಕ್ಕಳಿಗೆ ಇಂದು ದಾಖಲಿಸಿಕೊಳ್ಳಲಾಗುತ್ತಿದ್ದು, 18 ಸಾವಿರ ಹಣ ಕಟ್ಟುವಂತೆ ಹೇಳುತ್ತಿದ್ದಾರೆ ಎಂದು ದೂರಿದರು. ಶಾಲೆ ಯಾವಾಗ ಪ್ರಾರಂಭವಾಗುತ್ತದೆ ಎಂದು ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಏಕಾಏಕಿ ಹಣ ಹೊಂದಿಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪೋಷಕರಾದ ಪ್ರಕಾಶ್ ರೇವಣಕರ್ ಹೇಳಿದ್ದಾರೆ.
ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಪಾಲಿಸಿಕೊಂಡು ಒಂದನೇ ತರಗತಿಗೆ ಅಡ್ಮಿಷನ್ ಪ್ರಾರಂಭಿಸಿದ್ದೇವೆ. ಯಾರಿಗೂ ಕೂಡ ಒತ್ತಾಯ ಮಾಡುತ್ತಿಲ್ಲ. ಯಾರು ನಮ್ಮಲ್ಲಿ ಬರುತ್ತಿದ್ದಾರೋ ಅವರಿಗೆ ಮಾತ್ರ ದುಡ್ಡು ಕಟ್ಟುವಂತೆ ಸೂಚಿಸಿದ್ದೇವೆ. ಅಲ್ಲದೆ ಹಣ ತುಂಬಲು ಕಷ್ಟವಾದವರಿಗೆ ಹಂತ ಹಂತವಾಗಿ ತುಂಬುವಂತೆ ಸೂಚಿಸಿದ್ದು, ಅದರಂತೆ ಕೆಲವರು ಒಂದು ಸಾವಿರವನ್ನು ತುಂಬಿ ಅಡ್ಮಿಷನ್ ತೆಗೆದುಕೊಂಡಿದ್ದಾರೆ. ಆದರೆ ಕೆಲ ಪಾಲಕರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸೇಂಟ್ ಜೋಸೆಫ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ ಫಾದರ್ ಸಿಕ್ವೇರಾ ತಿಳಿಸಿದ್ದಾರೆ.