ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆ (Rain in Uttara Kannada) ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಕೊಯ್ಲಾದ ಭತ್ತದ ಬೆಳೆ (Paddy crop) ಸಂಪೂರ್ಣ ಮಳೆ ನೀರಿಗೆ ಸಿಕ್ಕು ಹಾನಿಯಾಗಿದೆ.
ಭಾನುವಾರ ಮಧ್ಯಾಹ್ನದ ಬಳಿಕ ಜಿಲ್ಲಾದ್ಯಂತ ಗುಡುಗು - ಸಿಡಿಲು ಸಹಿತ ಭಾರಿ ಮಳೆಯಾಗಿತ್ತು. ತಡರಾತ್ರಿವರೆಗೆ ಸುರಿದ ಅಕಾಲಿಕ ಮಳೆ, ಸೋಮವಾರ ಮುಂಜಾನೆ ಕೂಡ ಶಿರಸಿ, ಸಿದ್ದಾಪುರ ಸೇರಿದಂತೆ ಹಲವೆಡೆ ಸುರಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಮಳೆ ನೀರಿಗೆ ಸಿಕ್ಕು ಹಾನಿಯಾದ ಭತ್ತದ ಬೆಳೆ ಕರಾವಳಿಯ ಅಂಕೋಲಾ, ಹೊನ್ನಾವರ, ಕುಮಟಾ ಭಾಗದಲ್ಲಿ ಭತ್ತದ ಬೆಳೆ ಬೆಳೆದು ನಿಂತಿದ್ದು, ಅನೇಕರು ಕೊಯ್ಲು ಸಹ ಪ್ರಾರಂಭಿಸಿದ್ದಾರೆ. ಆದರೆ, ಭಾನುವಾರ ಸುರಿದ ಮಳೆಯಿಂದಾಗಿ ಬೆಳೆ ಸಂಪೂರ್ಣ ನೀರು ಪಾಲಾಗಿದೆ. ಗೋಕರ್ಣದ ಗಂಗೆಕೊಳ್ಳದಲ್ಲಿ ರೈತರೊಬ್ಬರು ಕಳೆದ ಎರಡು ದಿನದ ಹಿಂದೆ ಗದ್ದೆ ಕೊಯ್ಲು ಮಾಡಿದ್ದು, ಭತ್ತದ ಪೈರು ಸಂಪೂರ್ಣ ಮಳೆ ನೀರಿಗೆ ಸಿಕ್ಕಿ ತೇಲಲಾರಂಭಿಸಿದೆ. ಇಂದು ಮಳೆ ಕಡಿಮೆಯಾದ ಹಿನ್ನೆಲೆ ನೀರಿನಲ್ಲಿರುವ ಪೈರಿನ ರಕ್ಷಣೆಗೆ ರೈತರು ಮುಂದಾಗಿದ್ದಾರೆ.
ಕೈಗೆ ಬಂದ ಬೆಳೆ ಕೊನೆ ಗಳಿಗೆಯಲ್ಲಿ ನೀರು ಪಾಲಾಗಿ ಲಕ್ಷಾಂತರ ರೂ. ಬೆಳೆ ಹಾನಿಯಾಗಿದ್ದು, ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.