ಕಾರವಾರ:ಮೊಬೈಲ್ ಅಂಗಡಿಯವರ ಬಳಿ ದಂಡದ ಮೊತ್ತ ಕಡಿಮೆ ಮಾಡುವುದಾಗಿ ಹೇಳಿ ಸ್ಯಾಮ್‌ಸಂಗ್ ಮೊಬೈಲ್ ಅನ್ನು ಲಂಚದ ರೂಪದಲ್ಲಿ ಪಡೆದಿದ್ದ ಶಿರಸಿ ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕ ಕೆ.ಸಿ.ಮೋಹನ್ ರಾಜು ವಿರುದ್ಧದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಕೆ.ಸಿ.ಮೋಹನ್ ಅವರು ಯಲ್ಲಾಪುರದ ವಿಶ್ವನಾಥ ನಾರಾಯಣ ದೇಸಾಯಿ ಅವರಿಗೆ ಅಂಗಡಿಯಲ್ಲಿರುವ ಮೊಬೈಲ್ ಫೋನ್ಗಳ ಬಿಲ್ಲನ್ನು ಹಾಜರುಪಡಿಸದೇ ಇರುವುದು ಹಾಗೂ ಉತ್ಪಾದಕರ ಹೆಸರು ವಿಳಾಸ ಹಾಗೂ ದಿನಾಂಕಗಳನ್ನು ನಮೂದಿಸದೇ ಇರುವ ಕಾರಣಕ್ಕೆ ಮೊಬೈಲ್ಗಳನ್ನು ಜಪ್ತಿ ಮಾಡಿ 20-25 ಸಾವಿರ ರೂ ದಂಡ ಭರಿಸುವಂತೆ ಸೂಚಿಸಿದ್ದರು.
ನಂತರ ದಂಡದ ಹಣವನ್ನು ಕಡಿಮೆ ಮಾಡಲು ಲಂಚದ ರೂಪದಲ್ಲಿ ಒಂದು ಸ್ಯಾಮ್‌ಸಂಗ್ ಮೊಬೈಲ್ ಫೋನ್ ನೀಡುವಂತೆ ತಿಳಿಸಿದ್ದರು. 3,000 ರೂ. ದಂಡ ತುಂಬುವಂತೆ ಹೇಳಿ, ಲಂಚದ ರೂಪದಲ್ಲಿ ಮೊಬೈಲ್ ಫೋನ್ಗಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಧಿಕಾರಿ ವಿರುದ್ಧ ಕಾರವಾರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಟ್ರ‍್ಯಾಪ್ ಕಾರ್ಯಾಚರಣೆಯಲ್ಲಿ ಆಪಾದಿತ ಅಧಿಕಾರಿ ಲಂಚದ ರೂಪದಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಪಡೆಯುವಾಗ ಸಿಕ್ಕಿಬಿದ್ದಿದ್ದರು.