ಕರ್ನಾಟಕ

karnataka

ETV Bharat / state

ಸರ್ಕಾರದಿಂದ ಇನ್ನೂ ಮಂಜೂರಾಗದ ಹಣ: ಕಣ್ಣೀರಲ್ಲಿ ಕೈತೊಳೆಯುತ್ತಿರುವ ಸಂತ್ರಸ್ತರು - ಕಣ್ಣೀರಲ್ಲಿ ಕೈತೊಳೆಯುತ್ತಿರುವ ಸಂತ್ರಸ್ತರು

2019 ರಿಂದ 2020 ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸಾವಿರಾರು ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಇತ್ತ ಸಾಲ ಮಾಡಿ ಸೂರು ನಿರ್ಮಿಸಿಕೊಂಡವರಿಗೆ ಇನ್ನೂ ಹಣ ಮಂಜೂರಾಗಿಲ್ಲ. ಹಾಗಾಗಿ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಸಂತ್ರಸ್ತರು ಕಣ್ಣೀರಿನ ಜೀವನ ಸಾಗಿಸುವಂತಾಗಿದೆ.

flood
flood

By

Published : Feb 6, 2021, 7:22 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿಯೋಜನೆಯಡಿ ಬರಬೇಕಾದ ಹಣ ಸರ್ಕಾರದಿಂದ ಇನ್ನೂ ಮಂಜೂರಾಗದೇ ಇರುವುದರಿಂದ ಸಂತ್ರಸ್ತರು ಪರದಾಡುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಇನ್ನೂ ಬಿಡುಗಡೆಯಾಗದ ಹಣ

2019 ರಿಂದ 2020 ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸಾವಿರಾರು ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 2019 ರಲ್ಲಿ 2,265 ಮನೆಗಳು ಹಾನಿಯಾಗಿ ಕುಸಿದು ಬಿದ್ದಿದ್ದವು. ಇನ್ನು 2020 ರಲ್ಲಿ 1,273 ಮನೆಗಳು ಪ್ರವಾಹಕ್ಕೆ ಹಾನಿಯಾಗಿದ್ದವು. ಸರ್ಕಾರದಿಂದ ಪ್ರತಿ ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿಯೋಜನೆಯಡಿ ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಮಂಜೂರು ಮಾಡಿತ್ತು. ಹಣ ನೇರ ಖಾತೆಗೆ ಬಂದಿದ್ದರಿಂದ ಮನೆ ಕಳೆದುಕೊಂಡವರು ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದರು. ಆದರೆ, ರಾಜ್ಯ ಸರ್ಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ 2019 ರಿಂದ ಈವರೆಗೆ ಎರಡನೇ ಹಂತದ ಮಂಜೂರಿನ ಹಣ ಜನರ ಖಾತೆಗೆ ಸೇರಿಲ್ಲ. ಸರ್ಕಾರ ಹಣ ನೀಡುತ್ತೆ ಎನ್ನುವ ನಂಬಿಕೆಯಿಂದ ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಸೂರು ನಿರ್ಮಿಸಿಕೊಂಡವರು ಹಾಗೂ ಅಲ್ಪ ಮನೆ ನಿರ್ಮಿಸಿಕೊಂಡವರು ಇತ್ತ ಸೂರೂ ಇಲ್ಲ, ಅತ್ತ ಹಣವೂ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಹಲವು ಭಾಗದಲ್ಲಿ ಸರ್ಕಾರದ ವೆಬ್​​​​ಸೈಟ್ ನಲ್ಲಿ ಜಿಪಿಎಸ್ ಹಾಗೂ ಡೇಟಾ ಎಂಟ್ರಿ ಮಾಡುವ ಸಮಸ್ಯೆಯಿದೆ. ಹೀಗಾಗಿ ಹಲವು ತಾಲೂಕಿನಲ್ಲಿ ದಾಖಲೆಗಳನ್ನು ಸಮರ್ಪಕವಾಗಿ ಅಧಿಕಾರಿಗಳು ಅಪ್ಲೋಡ್​ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಹಣ ಸಹ ಸಂಬಂಧಪಟ್ಟ ಇಲಾಖೆಯ ಖಜಾನೆಯಲ್ಲಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡನೇ ಹಂತದಲ್ಲಿ ಜಿಲ್ಲೆಗೆ ಹಣ ಮಂಜೂರಾಗಿಲ್ಲ. ಜಿಲ್ಲಾಡಳಿತ ಕೂಡ ಈ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.

ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಜನರು ಪ್ರವಾಹ, ಕೊರೊನಾ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಇತ್ತ ಸಾಲ ಮಾಡಿ ಸೂರು ನಿರ್ಮಿಸಿಕೊಂಡವರಿಗೆ ಹಣ ಮಂಜೂರಾಗದೆ, ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಸಂತ್ರಸ್ತರು ಕಣ್ಣೀರಿನ ಜೀವನ ಸಾಗಿಸುವಂತಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಲಿ.

ABOUT THE AUTHOR

...view details