ಕಾರವಾರ (ಉ.ಕ): ಸಾಮಾನ್ಯವಾಗಿ ನಿರ್ಗತಿಕರು, ಭಿಕ್ಷುಕರು ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಅನ್ನುವವರ ಸಂಖ್ಯೆ ತುಂಬಾ ವಿರಳ. ಆದರೆ, ಇಲ್ಲೊಂದು ವಿವಿಧ ಸಂಘಟನೆಗಳ ಸಮಾನ ಮನಸ್ಕರ ತಂಡವೊಂದು ಭಿಕ್ಷುಕರು, ನಿರ್ಗತಿಕರನ್ನು ಸ್ವಚ್ಚಗೊಳಿಸಿ ಆರೈಕೆ ಮಾಡುವ ಮೂಲಕ ಮಾದರಿ ಕಾರ್ಯದಲ್ಲಿ ತೊಡಗಿದೆ.
ಕಾರವಾರ ನಗರದಲ್ಲಿ ಅಲೆದಾಡುತ್ತಿದ್ದ ಭಿಕ್ಷುಕರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಇಲ್ಲಿನ ಮದರ್ ತೆರೆಸಾ ಸೇವಾ ಸಂಸ್ಥೆ, ರೆಡ್ ಕ್ರಾಸ್ ಹಾಗೂ ಜನಶಕ್ತಿ ವೇದಿಕೆ ಸಂಘಟನೆ ಎಲ್ಲಾ ಭಿಕ್ಷುಕರನ್ನು ಕರೆತಂದು ಅವರಿಗೆ ಕ್ಷೌರ, ಸ್ನಾನ ಮಾಡಿಸಿ ಹೊಸ ಬಟ್ಟೆ ಉಡಿಸಿ ಹೊಸ ರೂಪ ಕೊಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ಭಿಕ್ಷುಕರ ಕೈಹಿಡಿದು ನೆರವಿಗೆ ನಿಂತ ಮದರ್ ತೆರೆಸಾ ಸಂಸ್ಥೆ ಕೇರಳ, ಮಹಾರಾಷ್ಟ್ರ, ಗೋವಾ, ಸೇರಿದಂತೆ ವಿವಿಧ ಭಾಗದ ಈ ಭಿಕ್ಷುಕರು ಹಲವು ವರ್ಷಗಳಿಂದ ಕಾರವಾರದಲ್ಲೇ ತಿರುಗಾಡುತ್ತಾ ಜೀವನ ಸಾಗಿಸುತ್ತಿದ್ದರು. ಸರಿಯಾಗಿ ಊಟ, ಸ್ನಾನ ಇರದೇ ನಿಶಕ್ತರಾಗಿದ್ದರು. ಅವರನ್ನ ಗುರುತಿಸಿ ಕರೆತಂದು ಸ್ವಚ್ಚಗೊಳಿಸುವ ಕಾರ್ಯ ಈ ಸಮಾಜ ಸೇವಕ ತಂಡ ಮಾಡಿದ್ದು, ಇದಾದ ನಂತರ ಅವರ ಕುಟುಂಬದವರನ್ನು ಹುಡುಕಿ ಕೆಲವರನ್ನು ಮನೆಗೆ ವಾಪಸ್ ಕಳುಹಿಸುವ ಕಾರ್ಯ ಮಾಡಿದೆ.
ಕೆಲವರನ್ನ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಭಿಕ್ಷುಕರ ಆರೈಕೆ ಕೇಂದ್ರಕ್ಕೆ ಕಳುಹಿಸಲು ಮುಂದಾಗಿದ್ದಾರೆ. ಇನ್ನು ಗಡಿ ಜಿಲ್ಲೆಯಾದ ಕಾರವಾರ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ವಾಹನಗಳನ್ನ ಏರಿ ಬರುವ ಹಲವರು ಭಿಕ್ಷುಕರಾಗಿ ಇಲ್ಲೇ ಉಳಿಯುತ್ತಿದ್ದಾರೆ. ಅಂತವರು ರಸ್ತೆ ಬದಿಯಲ್ಲೇ ಜೀವನ ನಡೆಸುತ್ತಿದ್ದು, ಜಿಲ್ಲೆಗೊಂದು ಭಿಕ್ಷುಕರ ಆರೈಕೆ ಕೇಂದ್ರ ಸ್ಥಾಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ತಮಗೆ ಯಾರು ಇಲ್ಲ ಎಂದು ರಸ್ತೆ ಬದಿ ಜೀವನ ಸಾಗಿಸುತ್ತಿದ್ದ ಭಿಕ್ಷುಕರಿಗೆ ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ಹೇಳುವ ಕಾರ್ಯವನ್ನು ಕಾರವಾರದ ಸಮಾಜ ಸೇವಕ ತಂಡ ಮಾಡಿದ್ದು, ಅವರಿಗೆ ಮರುಹುಟ್ಟು ನೀಡಿದೆ. ಸಮಾಜ ಮುಖಿ ಕಾರ್ಯ ಮಾಡಿರುವ ಈ ತಂಡಕ್ಕೆ ಸ್ಥಳೀಯರು ಮೆಚ್ಚುಗೆಯ ಮಾತನಾಡಿದ್ದಾರೆ.