ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ದಿಬ್ಬಣ ಮುಗಿಸಿ ಬರುವಾಗ ಟೆಂಪೋ ಪಲ್ಟಿಯಾದ ಪರಿಣಾಮ 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಅಘನಾಶಿನಿ ಮಾಸ್ತಿಕಟ್ಟೆಯ ಘಟ್ಟದ ಬಳಿ ನಡೆದಿದೆ. ಪಟ್ಟಣದ ನೆಲ್ಲಿಕೇರಿಯ ಮಹಾಸತಿ ಸಭಾಭವನದಲ್ಲಿ ಮದುವೆ ಮುಗಿಸಿ ವಧುವಿನ ಕಡೆಯವರು ಟೆಂಪೋ ಮೂಲಕ ಮನೆಗೆ ತೆರಳುತ್ತಿದ್ದಾಗ ಅಘನಾಶಿನಿಯ ಮಾಸ್ತಿಕಟ್ಟೆಯ ಘಟ್ಟದ ಬಳಿ ಪಲ್ಟಿಯಾಗಿ, ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ.
ಟೆಂಪೋದಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿದ್ದ ಕಾರಣ, ಘಟ್ಟ ಏರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಟೆಂಪೋ ಹಿಮ್ಮುಖವಾಗಿ ಚಲಿಸಿ ಪಲ್ಟಿಯಾಗಿದೆ. ಟೆಂಪೊದಲ್ಲಿದ್ದ ಸುಮಾರು 20 ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ ಏಳೆಂಟು ಮಂದಿಗೆ ಗಂಭೀರ ಗಾಯಗಳಾಗಿವೆ.
ಅಘನಾಶಿನಿಯ ಮೇಲಿನಕೇರಿ ನಿವಾಸಿಗಳಾದ ನಿರ್ಮಲ ಗೌಡ, ತಿಮ್ಮಪ್ಪ ಗೌಡ, ಕಮಲ ಗೌಡ, ಪಾರ್ವತಿ ಗೌಡ, ಗಣಪಿ ಗೌಡ, ಕನ್ನೆ ಗೌಡ, ತಿಮ್ಮಕ್ಕ ಗೌಡ ಎಂಬುವವರು ಗಂಭೀರ ಗಾಯಗೊಂಡಿದ್ದು, ಇವರೆಲ್ಲರನ್ನೂ ಸ್ಥಳೀಯರ ಸಹಕಾರದಿಂದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರ ಗಾಯಗೊಂಡಿದ್ದವರ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕುಮಟಾ ಶಾಸಕ ದಿನಕರ ಶೆಟ್ಟಿ ಭೇಟಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಟೆಂಪೋವನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕುಮಟಾ ಶಾಸಕ ದಿನಕರ ಶೆಟ್ಟಿ ಕುಮಟಾ ಆಸ್ಪತ್ರೆಗೆ ದೌಡಾಯಿಸಿದರು. ಈ ವೇಳೆ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದು, ಅಗತ್ಯ ಚಿಕಿತ್ಸೆಯನ್ನು ಒದಗಿಸುವಂತೆ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಪೋಸ್ಟ್ ಆಫೀಸ್ ಠೇವಣಿ ಹಣಕ್ಕೆ ಎಳ್ಳುನೀರು.. ಗ್ರಾಹಕರ ₹1.25 ಕೋಟಿ ರೂ. IPL ಬೆಟ್ಟಿಂಗ್ ಆಡಿದ ಪೋಸ್ಟ್ಮಾಸ್ಟರ್!