ಕಾರವಾರ :ಬಾಣಂತಿ ಸಾವಿನಲ್ಲಿ ನಿರ್ಲಕ್ಷ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಅವರನ್ನು ಮರು ನೇಮಕಗೊಳಿಸಿರುವುದಕ್ಕೆ ಗರಂ ಆಗಿರುವ ಶಾಸಕಿ ರೂಪಾಲಿ ನಾಯ್ಕ್ ಜಿಲ್ಲಾಧಿಕಾರಿ ಎದುರೆ ಸರ್ಜನ್ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಶಾಸಕಿ ರೂಪಾಲಿ ಡಾ.ಕುಡ್ತರಕರ್ ಮರು ನೇಮಕವನ್ನು ವಿರೋಧಿಸಿ ಮೀನುಗಾರ ಸಮುದಾಯದವರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಶಾಸಕಿ ಮಾತುಕತೆ ನಡೆಸಿದರು.
ಈ ಹಿಂದೆ ನಾನು ಮುಖ್ಯಮಂತ್ರಿ ಗಮನಕ್ಕೆ ತಂದು ಸರ್ಜನ್ ಕುಡ್ತರಕರ್ ಅವರನ್ನು ವರ್ಗಾವಣೆ ಮಾಡಿಸಿದ್ದೆ. ಆದರೆ, ಇದೀಗ ಸರ್ಕಾರ ಮತ್ತೆ ಮರು ನೇಮಕ ಮಾಡಿದೆ. ನಾನು ಶಾಸಕಿಯಿದ್ದರೂ ಈ ಬಗ್ಗೆ ನನ್ನ ಗಮನಕ್ಕೆ ತರದೆ ಸರ್ಕಾರ ಆದೇಶ ಮಾಡಿದ್ದು, ನಮ್ಮ ಸರ್ಕಾರದ ವಿರುದ್ಧವೇ ನಾನು ತಿರುಗಿ ಬೀಳಬೇಕಾಗಿದೆ. ನನ್ನ ಕ್ಷೇತ್ರದಲ್ಲಿ ಬರಲು ಆತನಿಗೆ ಎಷ್ಟು ಧೈರ್ಯ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಶಾಸಕಿ, ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ಬಾಣಂತಿ ಸಾವಿನ ಆರೋಪ ಎದುರಿಸುತ್ತಿದ್ದ ಕುಡ್ತರಕರ್ ಮರುನೇಮಕ ಖಂಡಿಸಿ ಮೀನುಗಾರರು ಮತ್ತಿತರ ಮುಖಂಡರು ಮೆರವಣಿಗೆ ನಡೆಸಿ ಜಿಲ್ಲಾ ಆಡಳಿತಕ್ಕೆ ಮನವಿ ನೀಡಿದ್ದರು.
ಈ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಗೀತಾ ಬಾನಾವಳಿ ಎಂಬುವ ಬಾಣಂತಿ ಸಾವಿನ ಕುರಿತು ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ತನಿಖಾ ತಂಡದ ಬಗ್ಗೆ ಪ್ರತಿಭಟನಾಕಾರರು ಈ ಹಿಂದೆಯೇ ಸಂದೇಹ ವ್ಯಕ್ತಪಡಿಸಿದ್ದರು.
ಉನ್ನತ ಮಟ್ಟದ ಅಧಿಕಾರಿಗಳಿರುವ ತಂಡ ರಚಿಸುವಂತೆಯೂ ಆಗ್ರಹಿಸಿದ್ದರು. ಆ ಸಮಿತಿ ನೀಡಲಿರುವ ವರದಿಯ ಬಗ್ಗೆ ಈ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಸ್ಥಳೀಯರು ಹಾಗೂ ಮೀನುಗಾರ ಸಮಾಜದವರ ಬೇಡಿಕೆಯಂತೆ ಗೀತಾ ಬಾನಾವಳಿ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಾಗಿದೆ. ಮರಣೋತ್ತರ ಪರೀಕ್ಷಾ ವರದಿಯೂ ಬರಬೇಕಾಗಿದೆ. ಸಾವಿಗೆ ಕಾರಣ ಏನು ಎನ್ನುವ ರಹಸ್ಯ ಬಹಿರಂಗಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.