ಭಟ್ಕಳ: ಜಿಲ್ಲಾಡಳಿತ ಲಾಕ್‌ಡೌನ್ ಸಡಿಲಿಸಿದ್ದು, ಕೆಲವೇ ಕೆಲವು ಅಂಗಡಿಗಳು ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಗಳು ಪುನಾ ರಂಭವಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಲಾಕ್‌ಡೌನ್ ಸಡಿಲಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಜನರ ಓಡಾಟ ಅಲ್ಲಲ್ಲಿ ಆರಂಭವಾಗಿದೆ. ಕೆಲವೆಡೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡರೆ, ಇನ್ನು ಕೆಲವೆಡೆ ಗುಂಪು ಗುಂಪಾಗಿ ನಿಂತಿರುವುದು ಕಂಡು ಬಂತು. ಜಿಲ್ಲಾಡಳಿತದ ಸೂಚನೆಯಿಲ್ಲದೇ ಅಂಗಡಿಗಳನ್ನ ತೆರೆಯಲಾಗಿದ್ದರೂ ಯಾವುದೇ ಅನವಶ್ಯಕ ಗುಂಪು ಗೂಡುವಿಕೆಗೆ ಅಂಗಡಿ ಮಾಲೀಕರು ಅವಕಾಶ ನೀಡಿಲ್ಲ. ಕೆಲ ಮೆಡಿಕಲ್ ಶಾಪ್ ಬಳಿ ಗುಂಪು ಗುಂಪಾಗಿ ಜನ ಸೇರಿರುವುದು ಗೋಚರಿಸಿತು.
ಲಾಕ್‌ಡೌನ್‌ನಿಂದ ಕೊಂಚ ರಿಲೀಫ್: ವ್ಯಾಪಾರ, ವಾಹನ ಸಂಚಾರ ಆರಂಭ - ಭಟ್ಕಳದ ಜನತೆಗೆ ಲಾಕ್‌ಡೌನ್‌ನಿಂದ ರಿಲೀಫ್
ಜಿಲ್ಲಾಡಳಿತ ಲಾಕ್‌ಡೌನ್ ಸಡಿಲಗೊಳಿಸಿರುವುದರಿಂದ ಭಟ್ಕಳ ತಾಲೂಕಿನಲ್ಲಿ ವಾಹನ ಸಂಚಾರ ಶುರುವಾಗಿದೆ. ಎರಡು ತಿಂಗಳ ಬಳಿಕ ಕೆಲ ಅಂಗಡಿ ಮುಂಗಟ್ಟುಗಳಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದ ಹಿನ್ನೆಲೆ ಮೊದಲ ದಿನವಾದ ಇಂದು ಸ್ವಲ್ಪಮಟ್ಟಿಗೆ ಜನರು ಮನೆಯಿಂದ ಹೊರ ಬಂದಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮುಂದಾದರು. ಇನ್ನು ಕೆಲವರು ಮನೆಯಲ್ಲೇ ಇರುವುದು ಕಂಡು ಬಂತು.
ದ್ವಿಚಕ್ರ ವಾಹನಗಳ ಓಡಾಟವಿದ್ದು ಆಟೋ ರಿಕ್ಷಾಗಳು ರಸ್ತೆಗಿಳಿದಿದ್ದವು. ಐದು ಕಂಟೇನ್‌ಮೆಂಟ್ ವಲಯ ಹೊರತುಪಡಿಸಿ ಹಲವಾರು ಅಂಗಡಿಗಳು 70 ದಿನದ ಬಳಿಕ ತೆರೆದು ವ್ಯಾಪಾರ ವಹಿವಾಟಿಗೆ ನಡೆಸಲಾರಂಭಿಸಿವೆ. ಬರೋಬ್ಬರಿ 66 ದಿನಗಳ ನಂತರ ಕೊರೊನಾ ನರಕಯಾತನೆಯ ನಂತರ ಭಟ್ಕಳದ ಜನತೆ ಕೊಂಚ ಮಟ್ಟಿಗೆ ಲಾಕ್ ಡೌನ್ ರಿಲೀಫ್ ಪಡೆದರು.
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ಹಿಂದಿನ ದಿನ ಸಂಜೆ ಕೆಲವು ಅಂಗಡಿಕಾರರು ತಮ್ಮ ಅಂಗಡಿಯನ್ನು ಸ್ವಚ್ಛಗೊಳಿಸಿ ವ್ಯಾಪಾರಕ್ಕೆ ಅಣಿಯಾಗಿದ್ದು, ಇನ್ನು ಕೆಲವು ಕಡೆಯಲ್ಲಿ ಮುಂಜಾನೆಯೇ ಬಂದು ಅಂಗಡಿ ಸ್ವಚ್ಛಗೊಳಿಸಿರುವುದು ಸಾಮಾನ್ಯವಾಗಿತ್ತು. ತಕ್ಷಣಕ್ಕೆ ಲಾಕ್ ಡೌನ್ ಸಡಿಲಿಕೆ ನೀಡಿದ್ದರೂ ಜನರು ಒಂದೇ ಸಮನೆ ಎಲ್ಲಿಯೂ ಓಡಾಡದೇ ಇರುವುದರಿಂದ ಕೆಲ ಅಂಗಡಿಕಾರರು ವ್ಯಾಪಾರದ ಬಗ್ಗೆ ಅಷ್ಟಾಗಿ ಚಿಂತೆ ಮಾಡಲಿಲ್ಲ.