ಕಾರವಾರ: ರಾಜ್ಯದ ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಹೊರತುಪಡಿಸಿ ಲೈಟ್ ಫಿಶಿಂಗ್‌ನಂತಹ ಅವೈಜ್ಞಾನಿಕ ಮೀನುಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೂ ಸಹ ಕೆಲ ಬೋಟುಗಳ ಮೀನುಗಾರರು ಕದ್ದುಮುಚ್ಚಿ ಬೆಳಕು ಮೀನುಗಾರಿಕೆಯಲ್ಲಿ ತೊಡಗುತ್ತಿದ್ದರು. ಈ ನಿಟ್ಟಿನಲ್ಲಿ ಮೀನುಗಾರರೇ ಅಧಿಕಾರಿಗಳನ್ನು ಬೋಟಿನ ಮೂಲಕ ಲೈಟ್ ಫಿಶಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಕರೆದೊಯ್ದು ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟ ಈ ಘಟನೆ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗಾಬಿತಕೇಣಿ ಭಾಗದ ಅರಬ್ಬೀ ಸಮುದ್ರದಲ್ಲಿ ಆರ್ಯಾದುರ್ಗಾ ಹೆಸರಿನ ಆಳಸಮುದ್ರ ಮೀನುಗಾರಿಕಾ ಬೋಟಿನಲ್ಲಿ ಜನರೇಟರ್ ಹಾಗೂ ದೊಡ್ಡ ದೊಡ್ಡ ಲೈಟ್‌ಗಳನ್ನ ಅಳವಡಿಸಿಕೊಂಡು ಮೀನುಗಾರಿಕೆ ನಡೆಸಲಾಗುತ್ತಿತ್ತು. ಇದು ಸ್ಥಳೀಯ ಮೀನುಗಾರರ ಕಣ್ಣಿಗೆ ಬಿದ್ದಿದ್ದು ಮರುದಿನ ಬೆಳಿಗ್ಗೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಕರಾವಳಿ ಕಾವಲುಪಡೆ ಪೊಲೀಸರನ್ನ ಬೋಟು ಇದ್ದ ಸ್ಥಳಕ್ಕೆ ಮೀನುಗಾರರೇ ಖುದ್ದು ಕರೆದೊಯ್ದು ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟಿನಲ್ಲಿದ್ದ ಮೂವರು ಕಾರ್ಮಿಕರನ್ನು ಹಿಡಿದುಕೊಟ್ಟಿದ್ದಾರೆ.
ಬೆಳಕು ಮೀನುಗಾರಿಕೆ, ಬುಲ್ ಟ್ರಾಲ್, ಕಪ್ಪೆ ಬೊಂಡಾಸ್ ಮೀನುಗಾರಿಕೆಯನ್ನು ಸರ್ಕಾರ ನಿಷೇಧ ಮಾಡಿದ್ದರೂ ಸಹ ಕೆಲವರು ಕದ್ದುಮುಚ್ಚಿ ಈ ಅವೈಜ್ಞಾನಿಕ ಪದ್ದತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಇತರೆ ಮೀನುಗಾರರಿಗೆ ನಷ್ಟವಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿರುವುದರಿಂದಲೇ ಲೈಟ್ ಫಿಶಿಂಗ್ ಇನ್ನೂ ಜೀವಂತವಾಗಿದೆ. ಅಲ್ಲದೆ ದಂಡ ಹಾಕಿದರು ಕೂಡ 10 ಸಾವಿರ ಹಾಕುತ್ತಾರೆ. ಆದರೆ ಲಕ್ಷಾಂತರ ರೂ ಮೀನು ಹಿಡಿಯುವ ಕಾರಣ ದಂಡದ ಹಣ ಹೋದರು ಪರವಾಗಿಲ್ಲ ಎಂದೂ ಇಂತಹ ಅಕ್ರಮ ಮೀನುಗಾರಿಕೆ ನಡೆಸುತ್ತಾರೆ. ಕೂಡಲೇ ಸರ್ಕಾರ, ಸಂಬಂಧಪಟ್ಟ ಸಚಿವರು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಟ್ರಾಲರ್ ಬೋಟು ಮಾಲಕ ಪ್ರಶಾಂತ ಹರಿಕಂತ್ರ ಆಗ್ರಹಿಸಿದ್ದಾರೆ.
ಇನ್ನು ಗೋವಾ, ಉಡುಪಿ, ಮಂಗಳೂರು ಭಾಗದಿಂದ ಬರುವ ಮೀನುಗಾರರು ಹಾಗೂ ಕೆಲ ಸ್ಥಳೀಯ ಮೀನುಗಾರರು ಆಳಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಸುತ್ತಾರೆ. ಬೋಟಿನಲ್ಲಿ ಅಳವಡಿಸಿರುವ ಜನರೇಟರ್ ಮೂಲಕ ಪ್ರಖರವಾದ ಬೆಳಕಿನ ಬಲ್ಬ್‌ಗಳನ್ನು ಸಮುದ್ರದತ್ತ ಉರಿಸಿದಾಗ ಅದರ ಬೆಳಕಿಗೆ ಆಕರ್ಷಿತವಾಗಿ ಮೀನುಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಬಲೆ ಹಾಕಿ ಮೀನುಗಾರಿಕೆ ನಡೆಸಲಾಗುತ್ತದೆ. ಆದರೆ ಇಂತಹ ಮೀನುಗಾರಿಕೆಯಿಂದ ಸಣ್ಣ ಸಣ್ಣ ಮೀನು ಮರಿಗಳು ಸಹ ಬಲೆಗೆ ಬಿದ್ದು ಸಾವನ್ನಪ್ಪುವುದರಿಂದ ಮೀನು ಸಂತತಿಯ ಮೇಲೆ ಭಾರೀ ಹೊಡೆತ ಬೀಳುತ್ತದೆ.