ಪೌರಕಾರ್ಮಿಕರ ಕಟ್ಟಡದಿಂದ ಕುಡಿಯುವ ನೀರಿನ ಬಾವಿ ಸೇರುತ್ತಿರುವ ಶೌಚದ ನೀರು ಕಾರವಾರ : ಅದು ಕಳೆದ ನಾಲ್ಕೈದು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಿದ್ದ ಅಪಾರ್ಟ್ಮೆಂಟ್. ಆದರೆ, ಈ ಕಟ್ಟಡ ಸೋರುವುದರ ಜೊತೆಗೆ ಶೌಚದ ನೀರು ಸುತ್ತಮುತ್ತಲಿನ ಮನೆ, ದೇವಸ್ಥಾನಗಳ ಬಳಿ ಹರಿದು ಹೋಗಿ ಕುಡಿಯುವ ನೀರಿನ ಮೂಲ ಸೇರುತ್ತಿದ್ದು, ಪೌರಕಾರ್ಮಿಕರು ಸೇರಿದಂತೆ ಸುತ್ತಮುತ್ತಲಿನ ಜನ ನಗರಸಭೆ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
ನಗರದ ಪಂಚರಿಶಿವಾಡದ ಬಳಿ 2019 ರಲ್ಲಿ ನಗರಸಭೆಯು ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 1.76 ಕೋಟಿ ವೆಚ್ಚದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ, ಒಟ್ಟು 16 ಮನೆಗಳನ್ನು ಹಿರಿಯ ಪೌರಕಾರ್ಮಿಕರಿಗೆ ಹಸ್ತಾಂತರ ಮಾಡಿತ್ತು. ಕಟ್ಟಡ ನಿರ್ಮಾಣದ ವೇಳೆ ಸ್ಥಳೀಯರು ರಸ್ತೆ ಅತಿಕ್ರಮಿಸಿಲಾಗಿದೆ ಎಂದು ಆರೋಪಿಸಿ, ಶೌಚಾಲಯಗಳ ಟ್ಯಾಂಕ್ಗಳನ್ನು ನಿರ್ಮಾಣ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
"ಅಪಾರ್ಟ್ಮೆಂಟ್‌ನ ಶೌಚಾಲಯದ ಟ್ಯಾಂಕ್ ತುಂಬಿ ಮಲೀನ ನೀರು ಹಿಂಭಾಗದ ಮನೆ, ದೇವಸ್ಥಾನ, ರಸ್ತೆಗಳ ಮೂಲಕ ಹರಿದು ಕುಡಿಯುವ ನೀರಿನ ಬಾವಿ ಸೇರತೊಡಗಿದೆ. ನಾಲೈದು ದಿನಕ್ಕೊಮ್ಮೆ ಸಕ್ಕಿಂಗ್ ಯಂತ್ರ ತಂದು ಮಲೀನ ನೀರು ಖಾಲಿ ಮಾಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದು ಬಡ ಪೌರಕಾರ್ಮಿಕರಿಗೆ ಸಮಸ್ಯೆಯಾಗಿದೆ. ಅಲ್ಲದೆ, ಎಲ್ಲಾ ಮನೆಗಳು ಸೋರುತ್ತಿವೆ. ಇದರಿಂದ ಮನೆ ಬೀಳುವ ಆತಂಕ ಎದುರಾಗಿದೆ. ಕಟ್ಟುವಾಗಲೇ ಸರಿಯಾಗಿ ಕಟ್ಟಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಕಾಂಪೌಂಡ್ ಕೂಡ ಈವರೆಗೆ ನಿರ್ಮಾಣ ಮಾಡಿಲ್ಲ" ಎಂದು ನಿವೃತ್ತ ಪೌರಕಾರ್ಮಿಕ ರಮೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅಪಾರ್ಟ್ಮೆಂಟ್ನಲ್ಲಿ ಶೌಚಾಲಯದ ಗುಂಡಿಗಳನ್ನು ಮನೆಗಳಿಗೆ ತಕ್ಕಂತೆ ನಿರ್ಮಾಣ ಮಾಡದ ಕಾರಣ ಈ ರೀತಿಯ ಮಲೀನ ನೀರು ಜನವಸತಿ ಪ್ರದೇಶದಲ್ಲಿ ಹರಿಯುತ್ತಿದೆ. ಇದರಿಂದ ಸ್ಥಳೀಯರಿಗೆ ರೋಗ ಹರಡುವ ಭೀತಿ ಇದೆ. ಪಾರ್ಕಿಂಗ್, ಕಾಂಪೌಂಡ್, ಕುಡಿಯುವ ನೀರಿನ ಸಂಪರ್ಕ ಇಲ್ಲ. ಇದೇ ಕೆಲಸವನ್ನು ಸಾಮಾನ್ಯ ಜನ ಮಾಡಿದ್ದರೆ ನಗರಸಭೆ ಅಧಿಕಾರಿಗಳು ಅಕ್ರಮ ಕಟ್ಟಡ ಎಂದು ತೆರವು ಮಾಡುತ್ತಿದ್ದರು. ಆದರೆ, ಇದೀಗ ನಗರಸಭೆ ಮಾಡಿದ ಎಡವಟ್ಟಿಗೆ ಜನ ಪರದಾಡಬೇಕಾಗಿದೆ. ಕೂಡಲೇ ಬಡ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಸುತ್ತಮುತ್ತಲಿನ ಜನರಿಗೆ ಆಗುವ ತೊಂದರೆ ತಪ್ಪಿಸಬೇಕು" ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಮೇಲ್ಛಾವಣಿ ಮಳೆಯಿಂದ ಸೋರಿಕೆ
ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸದಾನಂದ ಬಳಿಕ ಮಾತನಾಡಿ, "ಕಟ್ಟಡ ಕಳಪೆಯಾಗಿಲ್ಲ. ಆದರೆ, ಪೈಪ್ಲೈನ್ಗಳಲ್ಲಿ ಲಿಕೇಜ್ ಕಾಣಿಸುತ್ತಿರುವುದರಿಂದ ಈ ರೀತಿ ಸೋರಿಕೆಯಾಗುತ್ತಿದೆ. ಇದನ್ನು ಸರಿಪಡಿಸಿದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಹಾಗೆಯೇ, ಕುಡಿಯುವ ನೀರಿಗೆ ನಲ್ಲಿ ಸಂಪರ್ಕ ನೀಡುತ್ತೇವೆ. ಶೌಚಾಲಯ ಟ್ಯಾಂಕ್ ತುಂಬಿರುವುದರಿಂದ ಸಕ್ಕಿಂಗ್ ಮಷಿನ್ ಬಳಸಿ ಮಲಿನ ನೀರು ತೆಗೆಯುತ್ತೇವೆ. ಆದರೆ, ಕಾಂಪೌಂಡ್ ವಾಲ್ ನಗರಸಭೆ ನಿಧಿಯಿಂದ ಮಾಡಬೇಕಾಗಿರುವುದರಿಂದ ಹಿಂದೆ ಅಧ್ಯಕ್ಷರು ತಡೆಯುವಂತೆ ಸೂಚಿಸಿದ್ದರು. ಇದೀಗ ಮಳೆಗಾಲ ಮುಗಿದ ಬಳಿಕ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು. ಶೌಚಗುಂಡಿ ಸ್ವಚ್ಛ ಮಾಡುವಾಗ ಶುಲ್ಕ ಪಡೆಯಬೇಕಾಗಿದೆ. ಈ ಪ್ರಕರಣದಲ್ಲಿ ಆಯುಕ್ತರೊಂದಿಗೆ ಮಾತನಾಡಿ ಕೂಡಲೇ ನೀರು ಖಾಲಿ ಮಾಡಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ" ತಿಳಿಸಿದ್ದಾರೆ.