ಕಾರವಾರ: ಆತ ಇನ್ನೂ ಮದುವೆಯಾಗದೇ ತನ್ನ ಪ್ರಿಯತಮೆಗೆ ಮಗು ಕರುಣಿಸಿದ್ದ. ಇಷ್ಟಾದರೂ ತನ್ನ ಮಗಳಿಗೆ ಮಗುವಾದ ಸುದ್ದಿ ಕೇಳಿ ಕುಟುಂಬದೊಂದಿಗೆ ಆಸ್ಪತ್ರೆಗೆ ಪೋಷಕರು ಆಗಮಿಸಿದ್ದರು. ಆದರೆ, ಅತ್ತೆಯೊಂದಿಗೆ ಖ್ಯಾತೆ ತೆಗೆದ ಅಳಿಯ ಚಾಕುವಿನಿಂದ ಇರಿದಿದ್ದು, ಇದೀಗ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ.
ಮದುವೆಗೂ ಮುನ್ನ ಮಗು ಕರುಣಿಸಿದ ಕುಡುಕ:ಕದ್ರಾ ಮೂಲದ ಮಹಿಳೆ ಚಾಕು ಇರಿತಕ್ಕೆ ಒಳಗಾದವರು, ದಾಂಡೇಲಿ ಮೂಲದ ರಮಜಾನ್ (25) ಚಾಕು ಹಾಕಿದ ಆರೋಪಿ. ಈತ ಕಳೆದ ಒಂದು ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗಿ ದಾಂಡೇಲಿಯಲ್ಲಿ ನೆಲೆಸಿದ್ದ. ಬಳಿಕ ಆಕೆಯನ್ನು ಮದುವೆಯಾಗದೇ ಹಾಗೆ ಇಟ್ಟುಕೊಂಡಿದ್ದನ್ನಲ್ಲದೇ ಒಂದು ಹೆಣ್ಣು ಮಗುವಿನ ಜನ್ಮಕ್ಕೂ ಕಾರಣವಾಗಿದ್ದಾನೆ.
ಮಗಳು ಹೆರಿಗೆಯಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಮನಗಂಡು ಯುವತಿಯ ತಾಯಿ ಮಗುವನ್ನು ನೋಡಲು ಆಗಮಿಸಿದ್ದು, ಈ ವೇಳೆಯೇ ಆರೋಪಿ ರಮಜಾನ್ ಆಕ್ಷೇಪಿಸಿ ರಾದ್ಧಾಂತ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ್ದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ತೆರಳಿದ್ದರು.