ಶಿರಸಿ: ರಾಜ್ಯದಲ್ಲಿ ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿರಸಿಯ ಸೋದೆ ವಾದಿರಾಜ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಮಠಾಧೀಶ ವಿಶ್ವವಲ್ಲಭ ಶ್ರೀಗಳ ಆಶೀರ್ವಾದ ಪಡೆದ ಈಶ್ವರಪ್ಪ ಶ್ರೀಗಳ ಬಳಿ ಮಾತನಾಡಿದರು. ಈ ಹಿಂದೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಪ್ರಸ್ತಾಪವಾದಾಗ ಕಾಂಗ್ರೆಸ್ ವಿರೋಧದಿಂದ ತಡೆಯಾಗಿತ್ತು. ಆದರೆ ಈಗ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ತ್ವರಿತವಾಗಿ ಈ ಕಾಯ್ದೆ ಜಾರಿಗೆ ತಂದು ಗೋ ರಕ್ಷಣೆ ಮಾಡಲಾಗುವುದು ಎಂದರು.
ಸೋದೆ ವಾದಿರಾಜ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ ಕಾಯ್ದೆ ಜಾರಿಯ ನಂತರ ರಾಜ್ಯದ ವಿವಿಧೆಡೆಗಳಲ್ಲಿನ ಅನಧಿಕೃತ ಕಸಾಯಿ ಖಾನೆ ಸ್ಥಗಿತ ಮಾಡುವುದು, ಗೋಶಾಲೆಗಳ ಸ್ಥಾಪನೆ ಜೊತೆಗೆ ಗೋವುಗಳ ರಕ್ಷಣೆ, ಗೋಶಾಲೆಗಳಗೆ ಅನುದಾನ ನೀಡಿಕೆ, ಗೋರಕ್ಷಣೆ ಸಂಬಂಧ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಮಠಾಧೀಶರು ಇರುವ ಕಾರಣಕ್ಕೆ ದೇಶ ಹಾಗೂ ರಾಜ್ಯದಲ್ಲಿ ಧರ್ಮ ಉಳಿದಿದೆ ಜೊತೆಗೆ ಬಿಜೆಪಿ ಅಧಿಕಾರದಲ್ಲಿದೆ ಎಂದು ಹೇಳಿದರು.
ಈ ವೇಳೆ ಶ್ರೀಗಳು ಮಾತನಾಡಿ, ಗೋಹತ್ಯೆ ನಿಷೇಧ ಆಗಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಬಿಜೆಪಿ ಈ ನಿಟ್ಟಿನಲ್ಲಿ ಕ್ರಮವಹಿಸಿದರೆ ಶ್ಲಾಘನೀಯ ಕಾರ್ಯ ಎಂದರು. ಪ್ರಸ್ತುತ ಇರುವ ಗೋ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಹೇಳಿದರು.