ಕಾರವಾರ: ಗೋವಾದಿಂದ ಅಕ್ರಮಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಜಿಲ್ಲೆಯ ಅಬಕಾರಿ ಇಲಾಖೆ ವಶಕ್ಕೆ ಪಡೆದಿದೆ. ಮೀನು ಸಾಗಾಣಿಕೆ ವಾಹನದಲ್ಲಿ ಖಾಲಿ ಬಾಕ್ಸ್‌ಗಳೊಂದಿಗೆ ಸಾಗಿಸಲಾಗುತ್ತಿದ್ದ ಮದ್ಯವನ್ನು ಗೋವಾ-ಕರ್ನಾಟಕ ಗಡಿಯ ಮಾಜಾಳಿ ಬಳಿ ಜಪ್ತಿ ಮಾಡಿಕೊಳ್ಳಲಾಗಿದೆ.
ಅಕ್ರಮ ಮದ್ಯ ಸಾಗಾಟದ ಹಿನ್ನೆಲೆಯಲ್ಲಿ ಕಾರವಾರ ಗಡಿಯಲ್ಲಿ ಕಟ್ಟೆಚ್ಚರ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನ ಸೆಳೆಯಲು ಹಣ-ಹೆಂಡದ ಆಮಿಷ ಒಡ್ಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಗೋವಾ-ಕಾರವಾರ ಗಡಿಯಲ್ಲಿ ಪ್ರತಿಯೊಂದು ವಾಹನ ತಪಾಸಣೆ ನಡೆಸಲಾಗುತ್ತಿದೆ. ಅದರಂತೆ ಇಂದು ಮೀನಿನ ಖಾಲಿ ಬಾಕ್ಸ್‌ಗಳೊಂದಿಗೆ ಮಾಜಾಳಿ ಗಡಿ ಪ್ರವೇಶಿಸಿದ್ದ ಮೀನಿನ ವಾಹನವೊಂದು ಅಬಕಾರಿ ಸಿಬ್ಬಂದಿ ಗಮನಸೆಳೆದಿತ್ತು. ಮೊದಲು ಪರಿಶೀಲನೆ ನಡೆಸಿದ ವೇಳೆ ವಾಹನ ಖಾಲಿ ಇದೆ ಎನ್ನಿಸಿದ್ದು, ಬಳಿಕ ಸೂಕ್ಷ್ಮವಾಗಿ ಪರಿಶೀಲಿಸಿದಾಗ ವಾಹನದಲ್ಲಿ ಗೋವಾ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ.
ಮೀನು ಸಾಗಣೆ ಕಂಟೈನರ್‌ನ ಮೇಲ್ಭಾಗದಲ್ಲಿ ಸಣ್ಣ ಕಿಟಿಕಿಯಂತಹ ವ್ಯವಸ್ಥೆ ಮಾಡಿ, ಮೀನು ಇಡುವಲ್ಲಿ ಎರಡು ಪ್ರತ್ಯೇಕ ಕಂಪಾರ್ಟ್ಮೆಂಟ್ ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ಯಾರಿಗೂ ಗೊತ್ತಾಗದಂತೆ ವ್ಯವಸ್ಥೆ ಮಾಡಿ ಅದರಲ್ಲಿ ಮದ್ಯವನ್ನ ಅಡಗಿಸಿಡಲಾಗಿತ್ತು. ಎಂದಿನಂತೆ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಅಬಕಾರಿ ಸಿಬ್ಬಂದಿ, ಅನುಮಾನದ ಮೇರೆಗೆ ವಾಹನದ ಮೇಲೆ ಹತ್ತಿ ನೋಡಿದಾಗ ಮೂರ್ನಾಲ್ಕು ಜನರು ನಿಂತು ಪ್ರಯಾಣಿಸುವಷ್ಟು ಇದ್ದ ಜಾಗದಲ್ಲಿ 1,51,200 ರೂ. ಮೌಲ್ಯದ ಗೋವಾ ಮದ್ಯ ಹಾಗೂ 18,000 ರೂ. ಮೌಲ್ಯದ ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ. ವಾಹನ ಚಾಲಕನನ್ನ ವಶಕ್ಕೆ ಪಡೆದ ಸಿಬ್ಬಂದಿ ಮದ್ಯ ಹಾಗೂ ವಾಹನವನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಹಂಚುವ ಉದ್ದೇಶದಿಂದಲೇ ಗೋವಾದಿಂದ ಮದ್ಯ ಸಾಗಾಟವಾಗುತ್ತಿತ್ತು ಅನ್ನೋದು ಮೇಲ್ನೋಟಕ್ಕೆ ಖಚಿತವಾಗಿದೆ. ಹೀಗಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆ ಈ ರೀತಿ ಅಕ್ರಮವಾಗಿ ಗೋವಾ ರಾಜ್ಯದಿಂದ ಬರುವ ಮದ್ಯವನ್ನು ತಡೆಗಟ್ಟುವಂತೆ ಅಬಕಾರಿ ಎಸ್ಪಿ ವನಜಾಕ್ಷಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಹರಿದುಬರುತ್ತಿದ್ದ ಅಕ್ರಮ ಗೋವಾ ಮದ್ಯ ತಡೆದ ಅಬಕಾರಿ ಇಲಾಖೆಯು ಇಂತಹ ಪ್ರಕರಣ ಮರುಕಳಿಸದಂತೆ ಇದರ ಹಿಂದಿರುವ ಜಾಲ ಬೇಧಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಇದನ್ನೂ ಓದಿ: ಕೋವಿಡ್ ರೂಪಾಂತರಿ Omicron ಭೀತಿ: ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ