ಕಾರವಾರ(ಉತ್ತರಕನ್ನಡ):ಮಳೆ ಜೋರಾದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತದ ಭೀತಿ ಕಾಡತೊಡಗಿದೆ. ಮಹಾರಾಷ್ಟ್ರದ ಪನ್ವೆಲ್ನಿಂದ ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಕಾರವಾರದಿಂದ ಭಟ್ಕಳ ಗಡಿವರೆಗೂ ಚತುಷ್ಪಥಗೊಳಿಸಲಾಗುತ್ತಿದೆ.
ಎಂಟು ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿದ್ದು, ಈವರೆಗೂ ಪೂರ್ಣಗೊಂಡಿಲ್ಲ. ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಕೆಲವೆಡೆ ಅವೈಜ್ಞಾನಿಕ ಕೆಲಸ ನಡೆಸಿದೆ ಎನ್ನುವ ಆರೋಪವಿದೆ. ಪರಿಣಾಮ ಪ್ರತಿ ಮಳೆಗಾಲದಲ್ಲಿಯೂ ಗುಡ್ಡಗಳು ಕುಸಿಯುತ್ತಲೇ ಇದ್ದು ಈ ಬಾರಿಯೂ ಹೆದ್ದಾರಿ ಬಳಿಯ ಗುಡ್ಡದ ಮಣ್ಣು, ಕಲ್ಲುಗಳು ಧರೆಗುರುಳುತ್ತಿವೆ.
ಹೊನ್ನಾವರದ ಖರ್ವಾ ಕ್ರಾಸ್ ಬಳಿ ಕಳೆದ ಎರಡು ದಿನದ ಹಿಂದೆ ಗುಡ್ಡ ಕುಸಿತವಾಗಿದೆ. ಮಣ್ಣು ಹೆದ್ದಾರಿಯ ಒಂದು ಭಾಗದಲ್ಲಿ ಬಿದ್ದಿದ್ದು, ಆ ಸಮಯದಲ್ಲಿ ಯಾರೂ ಓಡಾಟ ನಡೆಸದ ಕಾರಣ ಅವಘಡಗಳು ಸಂಭವಿಸಿಲ್ಲ.
ಕಾರವಾರದ ಬಿಣಗಾ ಸಂಕ್ರುಭಾಗದ ಬಳಿ ಮಳೆಗಾಲ ಆರಂಭದಿಂದಲೂ ಗುಡ್ಡ ಕುಸಿಯುತ್ತಲೇ ಇದೆ. ಬೃಹತ್ ಬಂಡೆಗಲ್ಲುಗಳು ಹೆದ್ದಾರಿಗೆ ಉರುಳಿವೆ. ಗುಡ್ಡದ ಮೇಲಿಂದ ಹರಿದು ಬರುವ ಮಳೆ ನೀರು ಗುಡ್ಡದ ಕೆಳಹಂತದಲ್ಲಿರುವ ಮಣ್ಣಿನಲ್ಲಿ ಇಂಗಿ ಗುಡ್ಡ ಕುಸಿತವಾಗುತ್ತಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರು, ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ಪ್ರಯಾಣಿಕರು.
ಹೆದ್ದಾರಿ ಚತುಷ್ಪಥಗೊಳಿಸುವ ಕಾಮಗಾರಿ ಕುಂಟುತ್ತಾ ಸಾಗಿದೆ. ಕೆಲವೆಡೆ ಕಿರಿದಾದ ಹೆದ್ದಾರಿ ತಿರುವುಗಳಿಂದಾಗಿ ಅಪಘಾತಗಳು ಸಂಭವಿಸಿದೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಶೇ. 75ರಷ್ಟು ಕಾಮಗಾರಿ ಮುಗಿಸಿಕೊಂಡು ಕಳೆದ ಎರಡು ವರ್ಷದಿಂದ ಟೋಲ್ ಸಂಗ್ರಹ ಮಾಡುತ್ತಿರುವ ಗುತ್ತಿಗೆ ಕಂಪನಿ ಇದೀಗ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ. ಆದರೆ ಇದರಿಂದ ಪ್ರಯಾಣಿಕರ ಪ್ರಾಣಕ್ಕೆ ಕಂಟಕವಾಗುತ್ತಿದ್ದು ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಯಾಣಿಕರ ಆಗ್ರಹ.
ಇದನ್ನೂ ಓದಿ:ಬೆಳಗಾವಿ ಯುವಕನ ಕೊಲೆ ಪ್ರಕರಣ: ಐವರ ಬಂಧನ
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದ್ರೆ, ಈಗಾಗಲೇ ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆದ್ದಾರಿಯಲ್ಲಿ ನೀರು ಬ್ಲಾಕ್ ಆಗುವುದು, ಗುಡ್ಡ ಕುಸಿತ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಲಾಗಿದೆ. ಕೂಡಲೇ ಕ್ರಮವಾಗದಿದ್ದರೆ ಮತ್ತೊಮ್ಮೆ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.