ಕಾರವಾರ: ಲಾಕ್‌ಡೌನ್ ಹಿನ್ನೆಲೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಆದರೆ, ನೆರೆಯ ರಾಜ್ಯ ಗೋವಾ ಮೀನುಗಾರರು ಜಿಲ್ಲೆಯ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಮೀನುಗಾರಿಕೆ ನಡೆಸುತ್ತಿದ್ದು, ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ನಿಯಮ ಉಲ್ಲಂಘಿಸಿದ ಗೋವಾ ಮೀನುಗಾರರು ಕೋವಿಡ್-19 ಸೋಂಕು ನಿಯಂತ್ರಣ ಹಿನ್ನೆಲೆ ಇಡೀ ದೇಶಕ್ಕೆ ಲಾಕ್‌ಡೌನ್ ಘೋಷಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಕೃಷಿ, ಸಾಂಪ್ರದಾಯಿಕ ಮೀನುಗಾರಿಕೆ ಸೇರಿದಂತೆ ಕೆಲವು ವಲಯಗಳಿಗೆ ಲಾಕ್‌ಡೌನ್ ಸಡಿಲಿಕೆ ಮಾಡಿದ್ದಾರೆ. ಆಳಸಮುದ್ರ ಮೀನುಗಾರಿಕೆ ನಡೆಸುವ ಪರ್ಸಿನ್, ಟ್ರಾಲರ್ ಬೋಟ್ಗಳ ಮಾಲೀಕರು ನೆರೆ ರಾಜ್ಯದ ಮೇಲೆ ಅಸಮಾಧಾನಗೊಂಡಿದ್ದಾರೆ.
ಲಾಕ್‌ಡೌನ್ ಆದೇಶ ಇಡೀ ದೇಶಕ್ಕೆ ಅನ್ವಯಿಸುತ್ತಿದ್ದರೂ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ. ಗೋವಾ ರಾಜ್ಯದಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸಲು ಅವಕಾಶ ನೀಡಿದ್ದು, ಅವರು ಭಟ್ಕಳದವರೆಗೂ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಈ ಕೂಡಲೇ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಮಾಜಿ ಶಾಸಕ ಸತೀಶ್ ಶೈಲ್ ಒತ್ತಾಯಿಸಿದ್ದಾರೆ.
ಗಾಯದ ಮೇಲೆ ಬರೆ ಎಳೆದಂತೆ ಆಳಸಮುದ್ರದ ಮೀನುಗಾರರ ಪರಿಸ್ಥಿತಿಯಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಕೂಡಲೇ ಎರಡು ರಾಜ್ಯಗಳ ನಡುವಿನ ಅಸಮಾಧಾನವನ್ನು ಹೋಗಲಾಡಿಸಲು ಮುಂದಾಗಬೇಕಿದೆ.