ಶಿರಸಿ: ಗಂಗಾವತಿಯಲ್ಲಿ ನಡೆದ ನಗರಸಭೆ ಸದಸ್ಯನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರ ಮಾಹಿತಿ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಪಹರಣಕಾರರನ್ನು ಬಂಧಿಸಿದ್ದಾರೆ.
ಅಪಹರಣಕ್ಕೊಳಗಾದ ನಗರಸಭೆ ಸದಸ್ಯನನ್ನು ಹಳಿಯಾಳದ ವಸತಿ ಗೃಹಕ್ಕೆ ಕರೆದೊಯ್ಯುವ ವೇಳೆ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆ ವೇಳೆ ಒಬ್ಬ ಬಿಜೆಪಿ ಕಾರ್ಯಕರ್ತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಗಂಗಾವತಿಯಲ್ಲಿ ನಗರಸಭಾ ಸದಸ್ಯನ ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಗುರುವಾರ ಮಧ್ಯರಾತ್ರಿ ಕಾಂಗ್ರೆಸ್ನ ಹಿರಿಯ ಸದಸ್ಯ ಮನೋಹರ ಸ್ವಾಮಿ ಮುದೇನೂರು ಎಂಬುವವರನ್ನು ಅಪಹರಿಸಲಾಗಿತ್ತು. ಈ ಸಂಬಂಧ ಕಾಂಗ್ರೆಸ್ ಮುಖಂಡ ಸುರೇಶ್ ಗೌರಪ್ಪ ಅವರು ನಗರಸಭೆಯ ಮೂವರು ಸದಸ್ಯರು ಸೇರಿದಂತೆ ಒಟ್ಟು ಏಳು ಜನರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರನ್ನು ಸಂಪರ್ಕಿಸಿದ್ದು, ಠಾಣೆಯ ಪೊಲೀಸ್ ಡೈರಿಯಲ್ಲಿ ಮೊದಲು ಮಾಹಿತಿ ದಾಖಲಿಸಿ ನಂತರ ಗಂಗಾವತಿ ಪೊಲೀಸರ ಸುಪರ್ದಿಗೆ ನೀಡುವುದಾಗಿ ತಿಳಿಸಿದ್ದಾರೆ.