ಶಿರಸಿ:ಉತ್ತರ ಕನ್ನಡ ಜಿಲ್ಲೆ ಹಣ್ಣಿನ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿನ ಹಣ್ಣುಗಳಿಗೂ ಕೊರೊನಾ ಭೀತಿ ಎದುರಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಹಣ್ಣಿನ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೇ ರೈತರು ಪ್ರತಿ ದಿವಸ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಜಿಲ್ಲೆಯ ಸಿದ್ದಾಪುರ, ಬನವಾಸಿ, ಶಿವಮೊಗ್ಗದ ಸೊರಬ ಹಾಗೂ ಸಾಗರ ತಾಲೂಕುಗಳಲ್ಲಿ ಅನಾನಸ್ ಹಣ್ಣುಗಳನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ. ಅಂದಾಜು 50 ಸಾವಿರ ಟನ್ಗಳಷ್ಟು ಬೆಳೆ ಈ ಭಾಗದಲ್ಲಿ ಪ್ರತಿ ವರ್ಷ ಲಭ್ಯವಾಗುತ್ತದೆ. ಇಲ್ಲಿಯ ಜನರಿಗೆ ಇದು ಲಾಭದಾಯಕ ಬೆಳೆಯಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆರ್ಥಿಕ ಸಬಲತೆಗೆ ಪ್ರಯತ್ನಿಸುತ್ತಾರೆ. ಆದರೆ ಈ ಬಾರಿ ಬೆಳೆ ಕಟಾವಿಗೆ ಬಂದು ನಿಂತಿದ್ದರೂ ಕೊರೊನಾ ಲಾಕ್ಡೌನ್ನಿಂದಾಗಿ ಮಾರುಕಟ್ಟೆ ತಲ್ಲಣವಾಗಿದ್ದು, ರೈತರು ಹಾಕಿದ ದುಡ್ಡೂ ಸಹ ವಾಪಸ್ ಬರುವುದಿಲ್ಲ ಎಂಬ ಚಿಂತೆಯಲ್ಲಿದ್ದಾರೆ.
ಹಣ್ಣುಗಳನ್ನು ಬೆಳೆದು ಸಿಹಿ ನೀಡುತ್ತಿದ್ದ ರೈತನ ಬಾಳಲ್ಲಿ ಕಹಿ ಸ್ಥಳೀಯವಾಗಿ ಅನಾನಸ್ ಹಣ್ಣುಗಳಿಗೆ ಬೇಡಿಕೆಯಿದ್ದರೂ ದೊಡ್ಡ ಮಟ್ಟದ ಮಾರುಕಟ್ಟೆ ಮಾತ್ರ ದೆಹಲಿಯಾಗಿದೆ. ದೆಹಲಿಯಲ್ಲಿ ಒಂದು ದಿನಕ್ಕೆ 500 ಟನ್ಗಳಷ್ಟು ವ್ಯಾಪಾರ ನಡೆಯುತ್ತಿತ್ತು. ಇದರಿಂದ ರೈತರು ಸಾಕಷ್ಟು ಆದಾಯ ಗಳಿಸುತ್ತಿದ್ದರು. ಆದರೆ ಈ ಬಾರಿ ದೆಹಲಿ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದ್ದು, ಲಾಕ್ಡೌನ್ ಮುಗಿಯುವವರೆಗೆ ಆರಂಭವಾಗುವುದು ಕಷ್ಟಸಾಧ್ಯವಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಹಣ್ಣುಗಳ ಖರೀದಿಗೆ ಮುಂದಾಗಬೇಕು ಅಥವಾ ಪರಿಹಾರ ಘೋಷಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.
ಅನಾನಸ್ ಹಣ್ಣುಗಳ ಜೊತೆಗೆ ಜಿಲ್ಲೆಯಲ್ಲಿ ಬಾಳೆ, ಪಪ್ಪಾಯ, ಶುಂಠಿ ಬೆಳೆಗಳಿಗೂ ಸಹ ಸಾಕಷ್ಟು ಮಹತ್ವವಿದೆ. ರೈತರು ಮುಖ್ಯ ಬೆಳೆಗಳ ಜೊತೆಗೆ ಇವುಗಳನ್ನು ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿ ಎಲ್ಲಾ ಹಣ್ಣುಗಳ ದರವೂ ತೀವ್ರವಾಗಿ ಕುಸಿತ ಕಂಡಿದ್ದು, ಮಾರುಕಟ್ಟೆಯೂ ಇಲ್ಲದಾಗಿದೆ. ಇದರಿಂದ ಸಾಲ ಮಾಡಿ ಹಣ್ಣು ಬೆಳೆದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು, ಸರ್ಕಾರದತ್ತ ಮುಖ ಮಾಡಿ ಕುಳಿತಿದ್ದಾರೆ.