ಕರ್ನಾಟಕ

karnataka

ETV Bharat / state

ಮಳೆ ತಗ್ಗಿದರೂ ಮುಂದುವರಿದ ಪ್ರವಾಹ: ಹೆದ್ದಾರಿಗಳಲ್ಲಿ ಗುಡ್ಡ ಕುಸಿತ, ಸಂಚಾರಕ್ಕೆ ತೊಂದರೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

floods continue
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ

By

Published : Jul 25, 2023, 9:49 PM IST

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿದರು.

ಕಾರವಾರ (ಉತ್ತರ ಕನ್ನಡ):ಉತ್ತರ ಕನ್ನಡದಲ್ಲಿ ಅಬ್ಬರಿಸುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದ್ದು, ನದಿ ತೀರದ ಪ್ರದೇಶದಲ್ಲಿ ಸೃಷ್ಟಿಯಾಗಿದ್ದ ಪ್ರವಾಹ ಕೊಂಚ ಇಳಿಕೆಯಾಗಿದೆ. ಆದರೆ, ಪ್ರವಾಹ ಹಾಗೂ ಗಾಳಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಗುಡ್ಡ ಕುಸಿತದಿಂದಾಗಿ ಹಲವು ಹೆದ್ದಾರಿಗಳು ಬಂದ್​ ಆಗಿವೆ. ಜನ ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ಮುಂದುವರಿದಿದೆ.

ಉತ್ತರ ಕನ್ನಡದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಆರ್ಭಟಿಸುತ್ತಿದ್ದ ಮಳೆ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಪರಿಣಾಮ ಗಂಗಾವಳಿ, ಅಘನಾಶಿನಿ, ವರದಾ ಹಾಗೂ ಗುಂಡಬಾಳ ಮತ್ತು ಭಾಸ್ಕೇರಿ ಹೊಳೆ ತೀರದ ಪ್ರದೇಶದಲ್ಲಿ‌ ಸೃಷ್ಟಿಯಾಗಿದ್ದ ಪ್ರವಾಹ ನಿಧಾನವಾಗಿ ಇಳಿಕೆಯಾಗುತ್ತಿದೆ. ಅಂಕೋಲಾ ಬಿಳಿಹೊಯ್ಗೆ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗುತ್ತಿದೆ. ಆದರೆ, ತೀರಾ ತಗ್ಗು ಪ್ರದೇಶಗಳಲ್ಲಿರುವ ಜಮೀನುಗಳಲ್ಲಿ ನೆರೆ‌ ಪರಿಸ್ಥಿತಿ ಹಾಗೆ ಮುಂದುವರಿದಿದೆ.

ಮಳೆಯಿಂದಾಗಿ ನದಿ ಹಾಗೂ ಹಳ್ಳಗಳು ತುಂಬಿ ಹರಿಯುತ್ತಿರುವ ಕಾರಣ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಮುಂದುವರಿಸಲಾಗಿದೆ. ಜಲಾಶಯಗಳಲ್ಲಿ ಜಿಲ್ಲಾಡಳಿತ ಸೂಚಿಸಿದ ನೀರಿನ ಮಟ್ಟ ಕಾಯ್ದುಕೊಂಡು ಪ್ರವಾಹವಾಗದಂತೆ ಅಲ್ಪ ಪ್ರಮಾಣದಲ್ಲಿ ನೀರು ಹೊರಹಾಕಲಾಗುತ್ತಿದೆ. ಇನ್ನು ನದಿಗಳು ಉಕ್ಕಿ ಹರಿದ ಕಾರಣ ಹೊನ್ನಾವರ, ಕುಮಟಾದಲ್ಲಿ 11 ಕಾಳಜಿ ಕೇಂದ್ರ ತೆರೆಯಲಾಗಿದೆ. ಸುಮಾರು 360 ಜನರು ಆಶ್ರಯ ಪಡೆದಿದ್ದಾರೆ. ಆದರೆ, ಇಂದು ಮಳೆ ಹಾಗೂ ನೆರೆ ಕಡಿಮೆಯಾದ ಕಾರಣ ಎರಡು ಕಾಳಜಿ‌ ಕೇಂದ್ರದಿಂದ ಜನ ಮನೆಗೆ ತೆರಳಿದ್ದಾರೆ. ಇನ್ನು ಕಾಳಜಿ ಕೇಂದ್ರದಲ್ಲಿ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಮಾಹಿತಿ:ಮಳೆ ಕಡಿಮೆಯಾದರೂ ಕೂಡ ಪ್ರವಾಹ ಹಾಗೂ ಗಾಳಿ ಮಳೆಯಿಂದಾದ ಹಾನಿ ಪ್ರಮಾಣ ಹೆಚ್ಚಾಗಿದೆ. ಭಾರಿ ಮಳೆಯಿಂದಾಗಿ ಈವರೆಗೆ 3 ಮಂದಿ ಸಾವನ್ನಪ್ಪಿದ್ದು, ಜಿಲ್ಲಾದ್ಯಂತ ಒಟ್ಟು 289 ಮನೆಗಳಿಗೆ ಹಾನಿಯಾಗಿದೆ. 14 ಜಾನುವಾರುಗಳು ಸಾವನ್ನಪ್ಪಿವೆ. ಇದಲ್ಲದೇ ಕುಮಟಾ- ಶಿರಸಿ ಹೆದ್ದಾರಿ, ಕುಮಟಾ- ಸಿದ್ದಾಪುರ ಹೆದ್ದಾರಿ ಹಾಗೂ ಗೋವಾ ಸಂಪರ್ಕಿಸುವ ರಾಮನಗರ- ಲೋಂಡಾ ಹದ್ದಾರಿಯಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಭಾರಿ ವಾಹನಗಳು ಬೇರೆ ಮಾರ್ಗದಲ್ಲಿ ತೆರಳುವುದು ಉತ್ತಮ. ಈಗಾಗಲೇ ಗುಡ್ಡ ಕುಸಿಯುವ ಪ್ರದೇಶವನ್ನು ಗುರುತಿಸಿ ಮಣ್ಣು ತೆರವುಗೊಳಿಸಲಾಗುತ್ತಿದೆ. ಆದರೆ, ಇದೇ ರೀತಿ ಗುಡ್ಡ ಕುಸಿತ ಮುಂದುವರಿದಲ್ಲಿ ಈ ಹಿಂದಿನಂತೆ ರಾತ್ರಿ ಸಂಚಾರ ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಳೆ ಅವಾಂತರ: ಮನೆ, ವಿದ್ಯುತ್ ಮಗ್ಗದ ಕಾರ್ಖಾನೆಗಳಿಗೆ ನುಗ್ಗಿದ ನೀರು.. ಸಂಕಷ್ಟದಲ್ಲಿ ಜನಜೀವನ

ABOUT THE AUTHOR

...view details