ಕರ್ನಾಟಕ

karnataka

ETV Bharat / state

ನಾಟಿ ಮಾಡಿದ ಸಸಿ ಮಣ್ಣುಪಾಲು: ಗಂಗಾವಳಿ ತೀರದ ಕೃಷಿಕರಿಗೆ ಕಣ್ಣೀರಾಯ್ತು ಬದುಕು

ಉತ್ತರ ಕನ್ನಡ ಜಿಲ್ಲೆಯಲ್ಲಿ ತಿಂಗಳುಗಳ ಹಿಂದೆ ಅಬ್ಬರಿಸಿ ತಣ್ಣಗಾಗಿರುವ ವರುಣ ಸೃಷ್ಟಿಸಿದ್ದ ಅನಾಹುತ ಒಂದೆರಡಲ್ಲ. ಅದರಲ್ಲಿಯೂ ತಿಂಗಳ ಹಿಂದಷ್ಟೆ ಕೃಷಿ ಚಟುವಟಿಕೆ ಮುಗಿಸಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದವರಿಗೆ ಗಂಗಾವಳಿ ಪ್ರವಾಹ ನದಿತೀರದ ಜನರಿಗೆ ಇನ್ನಿಲ್ಲದ ಆಘಾತ ನೀಡಿದೆ.

flood-effect-on-farmers-at-gangavali-river-bank
ನಾಟಿ ಮಾಡಿದ ಸಸಿ ಮಣ್ಣುಪಾಲು: ಗಂಗಾವಳಿ ತೀರದ ಕೃಷಿಕರಿಗೆ ಕಣ್ಣೀರಾಯ್ತು ಬದುಕು

By

Published : Aug 28, 2021, 10:25 PM IST

Updated : Aug 28, 2021, 10:40 PM IST

ಕಾರವಾರ:ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಗದ್ದೆ ನಾಟಿ ಮಾಡಿಸಿದ್ದ ರೈತರಿಗೆ ಪ್ರವಾಹ ಆಘಾತ ನೀಡಿದೆ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಗದ್ದೆಗಳಲ್ಲಿ ಕೆಸರು ತುಂಬಿಕೊಂಡು ನೆಟ್ಟ ಸಸಿಗಳು ಮಣ್ಣು ಪಾಲಾಗಿವೆ. ಮತ್ತೆ ನಾಟಿ ಮಾಡಲು ಲಕ್ಷಾಂತರ ರೂ. ವ್ಯಯಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಿಂಗಳುಗಳ ಹಿಂದೆ ಅಬ್ಬರಿಸಿ ತಣ್ಣಗಾಗಿರುವ ವರುಣ ಸೃಷ್ಟಿಸಿದ್ದ ಅನಾಹುತ ಒಂದೆರಡಲ್ಲ. ಅದರಲ್ಲಿಯೂ ತಿಂಗಳ ಹಿಂದಷ್ಟೆ ಕೃಷಿ ಚಟುವಟಿಕೆ ಮುಗಿಸಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದವರಿಗೆ ಗಂಗಾವಳಿ ಪ್ರವಾಹ ಅಂಕೋಲಾ ತಾಲೂಕಿನ ನದಿತೀರದ ಜನರಿಗೆ ಇನ್ನಿಲ್ಲದ ಆಘಾತ ನೀಡಿದೆ. ಊರಿಗೆ ಊರೇ ಮುಳುಗಡೆಯಾಗಿದ್ದ ಅಂಕೋಲಾದ ಶಿರೂರು ಗ್ರಾಮದಲ್ಲಿ ಕೃಷಿ ಭೂಮಿಗಳು ಸಂಪೂರ್ಣ ನೆಲಕಚ್ಚಿವೆ.

ನಾಟಿ ಮಾಡಿದ ಸಸಿ ಮಣ್ಣುಪಾಲು

ಗ್ರಾಮದಲ್ಲಿ 300 ಮನೆಗಳಿದ್ದು, ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಎರಡು ದಿನಗಳ ಕಾಲ ಗಂಗಾವಳಿ ನದಿ ಹರಿದ ಪರಿಣಾಮ ಗದ್ದೆಗಳಲ್ಲಿ ಮಣ್ಣು ಕಲ್ಲುಗಳು ತುಂಬಿಕೊಂಡು ಬೆಳೆ ಸಂಪೂರ್ಣ ನಾಶವಾಗಿದೆ. ಪ್ರವಾಹ ಬರುವ ವಾರ ಹದಿನೈದು ದಿನಗಳ ಮುಂಚೆ ನಾಟಿ ಮಾಡಿದ್ದ ಗದ್ದೆಗಳಲ್ಲಿ ಮೋಣಕಾಲು ಉದ್ದವರೆಗೆ ಕೆಸರು ತುಂಬಿಕೊಂಡಿದೆ. ಮಾತ್ರವಲ್ಲದೆ ಎರಡು ದಿನಗಳ ಕಾಲ ನೀರು ನಿಂತ ಕಾರಣ ಸಸಿಗಳು ಕೊಳೆತು ಎಲ್ಲೊ ಒಂದೊ ಎರಡು ಬುಡಗಳು ಮಾತ್ರ ಚಿಗುರಿಕೊಂಡಿವೆ. ಆದರೆ ಕೃಷಿಯನ್ನೆ ನಂಬಿದ ಈ ಭಾಗದ ನೂರಾರು ಕೃಷಿ ಕುಟುಂಬಗಳು ಅತಂತ್ರರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಡಿಗಾಸಿನ ಪರಿಹಾರ:

ಪ್ರವಾಹದಲ್ಲಿ ಜಿಲ್ಲೆಯಾದ್ಯಂತ ಸುಮಾರು 910 ಎಕರೆ ಕೃಷಿ ಭೂಮಿ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ಸದ್ಯ ಸರ್ಕಾರ ಸಮೀಕ್ಷೆ ಮಾಡಿ ಪರಿಹಾರ ನೀಡುವ ಭರವಸೆ ನೀಡಿದೆ. ಆದರೆ ಇನ್ನೂ ಕೂಡ ಸಮೀಕ್ಷೆಯೇ ಪೂರ್ಣಗೊಂಡಿಲ್ಲ. ಅದರಲ್ಲಿಯೂ ಸರ್ಕಾರ ನೀಡುವ ಬಿಡುಗಾಸಿನ ಪರಿಹಾರದಿಂದ ನಾವು ಖರ್ಚು ಮಾಡುವ ಅರ್ಧ ಹಣ ಸಿಗುವುದಿಲ್ಲ. ಕಷ್ಟಪಟ್ಟು ಬೆಳೆದ ಬೆಳೆ ಈ ರೀತಿ ಆದರೆ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಸ್ಥಳೀಯರಾದ ದೇವು ಗೌಡ.

ಕಣ್ಣೀರಾಯ್ತು ಗಂಗಾವಳಿ ತೀರದ ಕೃಷಿಕರ ಬದುಕು

ಮಣ್ಣು ತೆರವಿಗೆ ಬೇಕಿದೆ ಲಕ್ಷಾಂತರ ಹಣ:

ಪ್ರವಾಹದಿಂದ ಬಹುತೇಕ ಭಾಗಗಳಲ್ಲಿ ಸಸಿಗಳು ಕೊಳೆತು ಹೋಗಿದೆ. ಆದರೆ ಸಸಿ ಇದ್ದಂತಹ ಒಂದಿಷ್ಟು ಮಂದಿ ಮತ್ತೆ ನಾಟಿ ಮಾಡಿದ್ದಾರೆ. ಆದರೆ ಹಾನಿಯಾದ ಹೆಚ್ಚಿನ ಭೂಮಿಯಲ್ಲಿ ಸಸಿಗಳು ಕೊಳೆತು ಬರುಡಾಗಿದೆ. ಇನ್ನು ಕೆಲವೆಡೆ ಕೆಸರು ತುಂಬಿಕೊಂಡಿದ್ದು ಇದೇ ದೊಡ್ಡ ತಲೆನೋವಾಗಿದೆ. ಇಂತಹ ಕೊಳಕು ಮಣ್ಣಿನಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ. ಮಾಡಿದರು ಕೂಡ ಬೆಳೆ ಬರುವುದಿಲ್ಲ. ಈ ಕಾರಣದಿಂದ ತೆರವು ಮಾಡುವುದು ಅನಿವಾರ್ಯವಾಗಿದೆ. ಆದರೆ ಗದ್ದೆಗಳಲ್ಲಿ ಸಾಕಷ್ಟು ಮಣ್ಣು ತುಂಬಿರುವ ಕಾರಣ ಕೆಸರು ತೆಗೆಯಲು ಲಕ್ಷಾಂತರ ರೂಪಾಯಿ ಕರ್ಚು ಮಾಡಬೇಕಿದೆ ಎನ್ನುತ್ತಾರೆ ಈ ಭಾಗದ ರೈತ ನಾಗಪ್ಪ.

ಕೊಳೆತ ಸಸಿಗಳು

ಒಟ್ಟಾರೆ ಸತತ ಮೂರು ವರ್ಷಗಳಿಂದ ನೆರೆಯ ಅಟ್ಟಹಾಸಕ್ಕೆ ಸಿಲುಕುತ್ತಿರುವ ಗ್ರಾಮಸ್ಥರು ಕೃಷಿ ಮಾಡಲೂ ಪರದಾಡಬೇಕಾಗಿರೋದು ನಿಜಕ್ಕೂ ದುರಂತವೇ. ಎರಡು ದಿನಗಳ ನೆರೆ ನೂರಾರು ಕುಟುಂಬಗಳ ವರ್ಷದ ಕೂಳನ್ನೇ ಕಸಿದುಕೊಂಡಿದ್ದು ಸಂಬಂಧಪಟ್ಟವರು ಇತ್ತ ಗಮನಹರಿಸಿ ಮತ್ತೆ ನೆರೆ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ:Video: ಚಾಲಕನ ಅಸಭ್ಯ ವರ್ತನೆಯಿಂದ ಚಲಿಸುತ್ತಿದ್ದ ಆಟೋದಿಂದ ಜಿಗಿದ ಯುವತಿ

Last Updated : Aug 28, 2021, 10:40 PM IST

ABOUT THE AUTHOR

...view details