ಶಿರಸಿ:ರಜೆಯ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯಲ್ಲಿ ಇಂದು ನಡೆದಿದೆ. ಇತ್ತೀಚೆಗೆ ಶಿರಸಿಯ ಬಂಡಲದಲ್ಲಿ ಸಂಭವಿಸಿದ್ದ ಬಸ್ ಮತ್ತು ಕಾರು ನಡುವಿನ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಜರುಗಿದೆ.
ಶಿರಸಿಯ ಭೈರುಂಭೆ ಸಮೀಪ ಶಾಲ್ಮಲಾ ನದಿಯಲ್ಲಿ ಘಟನೆ ಸಂಭವಿಸಿದೆ. ಮೃತರೆಲ್ಲರೂ ಶಿರಸಿ ನಗರದವರು. ರಾಮನಬೈಲಿನ ಮೌಲಾನಾ ಅಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22) ಹಾಗೂ ಯುವಕ ಉಮರ್ ಸಿದ್ದಿಕ್ (23) ಮೃತರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಸಂಜೆ ವೇಳೆಗೆ ಮೂವರ ಮೃತದೇಹ ಪತ್ತೆ ಮಾಡಲಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಆಗಿದ್ದೇನು?:ಶಾಲ್ಮಲಾ ನದಿ ತೀರವು ಪ್ರವಾಸಿ ತಾಣವಾಗಿದ್ದು, ರಜೆಯ ದಿನದಂದು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಇಲ್ಲಿಯೇ ಅಡುಗೆ ತಯಾರಿಸಿ, ಊಟ ಮಾಡಿ ಸಂಜೆಯವರೆಗೂ ಇದ್ದು ಹೋಗುತ್ತಾರೆ. ನದಿಯಲ್ಲಿ ಘಟನೆ ನಡೆದ ಸ್ಥಳವಾದ ಭೂತನಗುಂಡಿ ಆಳವಾಗಿದ್ದು, ಇಲ್ಲಿಯ ಕಲ್ಲುಬಂಡೆಗಳು ಜಾರುವುದರಿಂದ ನೀರಿಗಿಳಿಯದಂತೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.