ಕರ್ನಾಟಕ

karnataka

ETV Bharat / state

ಗಾಯದ ಮೇಲೆ ಬರೆ ಎಳೆದ ಕೊರೊನಾ.. ಅವಧಿಗೂ ಮುನ್ನವೇ ದಡ ಸೇರಿದ ಬೋಟ್​ಗಳು - ಕರಾವಳಿ ಭಾಗದ ಮೀನುಗಾರರಿಗೆ ಸಮಸ್ಯೆ

ಈ ಬಾರಿ ಕೊರೊನಾ ಎರಡನೇ ಅಲೆ ಲಾಕ್‌ಡೌನ್ ಜಾರಿ ಹಾಗೂ ತೌಕ್ತೆ ಚಂಡಮಾರುತ ಎದುರಾದ ಹಿನ್ನೆಲೆ ಮೇ ತಿಂಗಳ ಪ್ರಾರಂಭದಲ್ಲೇ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಬಹುತೇಕ ಪರ್ಸಿನ್ ಬೋಟುಗಳು ಸಮುದ್ರಕ್ಕೆ ಇಳಿಯದೇ ದಡದಲ್ಲೇ ಲಂಗರು ಹಾಕಿ ನಿಂತಿವೆ. ಪರಿಣಾಮ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮೀನುಗಾರಿಕೆ ನಡೆಯದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ.

karwar
karwar

By

Published : Jun 1, 2021, 3:44 PM IST

Updated : Jun 1, 2021, 7:23 PM IST

ಕಾರವಾರ: ಈಗಾಗಲೇ ನಷ್ಟದಲ್ಲಿರೋ ಮೀನುಗಾರರು ಇದೀಗಲಾಕ್‌ಡೌನ್‌‌ ಎಫೆಕ್ಟ್ ಮತ್ತು ಚಂಡಮಾರುತದಿಂದಾಗಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸರ್ಕಾರದ ಆದೇಶದಂತೆ ಪ್ರತಿವರ್ಷ ಜೂನ್ 1 ರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ. ದುರದೃಷ್ಟವಶಾತ್ ಕೊರೊನಾ ಅಟ್ಟಹಾಸದಿಂದಾಗಿ ಕಳೆದ ವರ್ಷ ಸರಿಯಾಗಿ ಮೀನುಗಾರಿಕೆ ಮಾಡಲಾಗದೇ ಮೀನುಗಾರರು ನಷ್ಟ ಅನುಭವಿಸಬೇಕಾಯ್ತು. ಈ ಬಾರಿಯೂ ಸಹ ಚಂಡಮಾರುತ ಹಾಗೂ ಲಾಕ್‌ಡೌನ್‌‌ ಎಫೆಕ್ಟ್ ತಟ್ಟಿದ್ದು, ಮೀನುಗಾರಿಕೆ ನಡೆಸಲಾಗದೇ ನಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದೇ ಕಷ್ಟಸಾಧ್ಯ ಎಂಬಂತಾಗಿದೆ. ಕಳೆದ ವರ್ಷ ವಕ್ಕರಿಸಿದ ಕೊರೊನಾದಿಂದಾಗಿ ಮೀನುಗಾರಿಕೆ ನಡೆಸಲು ಕಾರ್ಮಿಕರಿಲ್ಲದೇ ಪರದಾಡುವಂತಾಗಿತ್ತು. ಬಳಿಕ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಂಡು ಮೀನುಗಾರಿಕೆಗೆ ತೆರಳಿದರೂ ಮತ್ಸ್ಯಕ್ಷಾಮ ಎದುರಾಗಿದ್ದರಿಂದ ಮೀನುಗಾರಿಕೆ ಕುಂಟುತ್ತಾ ಸಾಗಿತ್ತು. ಈ ಬಾರಿ ಸಹ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದ ಅವಧಿಯಲ್ಲೇ ಮತ್ತೆ ಕೊರೊನಾ ಹೆಚ್ಚಾಗಿ ಲಾಕ್‌ಡೌನ್ ಜಾರಿಯಾಗಿದ್ದು, ಅವಧಿಗೆ ಮುನ್ನವೇ ಮೀನುಗಾರಿಕೆ ಸ್ಥಗಿತಗೊಂಡಿದೆ.

ಗಾಯದ ಮೇಲೆ ಬರೆ ಎಳೆದ ಕೊರೊನಾ.. ಅವಧಿಗೂ ಮುನ್ನವೇ ದಡ ಸೇರಿದ ಬೋಟ್​ಗಳು

ಸರ್ಕಾರದ ಆದೇಶದಂತೆ ಪ್ರತಿವರ್ಷ ಜೂನ್, ಜುಲೈ ತಿಂಗಳ ಮಳೆಗಾಲ ಪ್ರಾರಂಭದ ಅವಧಿಯಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುವುದರಿಂದ 61 ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯುವುದಿಲ್ಲ. ಆದರೆ, ಈ ಬಾರಿ ಕೊರೊನಾ ಎರಡನೇ ಅಲೆ ಲಾಕ್‌ಡೌನ್ ಜಾರಿ ಹಾಗೂ ತೌಕ್ತೆ ಚಂಡಮಾರುತ ಎದುರಾದ ಹಿನ್ನೆಲೆ ಮೇ ತಿಂಗಳ ಪ್ರಾರಂಭದಲ್ಲೇ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಬಹುತೇಕ ಪರ್ಸಿನ್ ಬೋಟುಗಳು ಸಮುದ್ರಕ್ಕೆ ಇಳಿಯದೇ ದಡದಲ್ಲೇ ಲಂಗರು ಹಾಕಿ ನಿಂತಿವೆ. ಪರಿಣಾಮ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮೀನುಗಾರಿಕೆ ನಡೆಯದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ. ಆದರೆ, ವಿವಿಧ ವಲಯಗಳ ಜನತೆಗೆ ಸರ್ಕಾರ ಕೋವಿಡ್ ಪರಿಹಾರ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದು, ಮೀನುಗಾರರನ್ನು ಮಾತ್ರ ನಿರ್ಲಕ್ಷ್ಯಿಸಲಾಗಿದೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಮೀನುಗಾರಿಕೆ ನಿಷೇಧದ ಎರಡು ತಿಂಗಳ ಅವಧಿಯಲ್ಲಿ ಮೀನುಗಾರರು ಬೋಟು, ಬಲೆಗಳ‌ ರಿಪೇರಿಯಲ್ಲಿ ತೊಡಗಿಕೊಳ್ಳುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನು ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವ ಮೀನುಗಾರರಿಗೆ, ಉತ್ತಮ ಮೀನುಗಾರಿಕೆ ನಡೆದಲ್ಲಿ ಮಾತ್ರ ಅದನ್ನ ತೀರಿಸುವುದು ಸಾಧ್ಯ. ಆದರೆ, ಕಳೆದ ವರ್ಷದಿಂದ ಕೊರೊನಾ, ಮತ್ಸ್ಯಕ್ಷಾಮ ಹಾಗೂ ಚಂಡಮಾರುತದಂತಹ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸಮರ್ಪಕವಾಗಿ ಮೀನುಗಾರಿಕೆ ನಡೆದಿಲ್ಲ. ಇದರಿಂದ ಮೀನುಗಾರರು ನಷ್ಟದಲ್ಲಿದ್ದು ಸರ್ಕಾರದಿಂದಲೂ ಸೂಕ್ತ ನೆರವು ಸಿಗದೇ ಪರದಾಡುವಂತಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಮೀನುಗಾರ ಸಮುದಾಯದ ಸಂಕಷ್ಟವನ್ನು ಪರಿಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಒಂದಿಲ್ಲೊಂದು ಅಡೆತಡೆಗಳಿಂದಾಗಿ ಮೀನುಗಾರಿಕೆ ನಡೆಯದೇ ಮೀನುಗಾರರ ಸಮುದಾಯ ಸಂಕಷ್ಟದಲ್ಲಿದ್ದು, ಸರ್ಕಾರ ಈ ಬಾರಿಯಾದರೂ ಸೂಕ್ತ ನೆರವು ನೀಡಬೇಕಿದೆ. ಕೃಷಿಯಂತೆ ಮೀನುಗಾರಿಕೆಯನ್ನೇ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದು ಸರ್ಕಾರ ನೆರವಿಗೆ ಬಾರದಿದ್ದಲ್ಲಿ ಮೀನುಗಾರಿಕೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

Last Updated : Jun 1, 2021, 7:23 PM IST

ABOUT THE AUTHOR

...view details