ಕಾರವಾರ (ಉತ್ತರ ಕನ್ನಡ):ಜನ ದುಡ್ಡಿಗಾಗಿ ಏನು ಬೇಕಾದ್ರು ಮಾಡ್ತಾರೆ. ನಕಲಿ ಕರೆನ್ಸಿ, ನಕಲಿ ವಸ್ತು, ಮಾತ್ರವಲ್ಲದೆ ನಕಲಿ ಸರ್ಟಿಫಿಕೇಟ್ ಕೂಡ ಮಾಡಿ ಸಂಬಂಧಪಟ್ಟ ಇಲಾಖೆಯನ್ನು ಯಾಮಾರಿಸ್ತಾರೆ. ಇದೀಗ ನಕಲಿ ಪಾಸ್‌ಪೋರ್ಟ್ ಸಿದ್ಧಪಡಿಸುತ್ತಿದ್ದ ಕಿಂಗ್ಪಿನ್ ಮಹಿಳೆ ಸಹಿತ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಬಲೆಗೆ ಕೆಡವಿದ್ದಾರೆ.
ಹುಬ್ಬಳ್ಳಿಯ ಶ್ವೇತಾ ಅಲಿಯಾಸ್ ಲಕ್ಷ್ಮೀ, ಶಿರಸಿಯ ಹುಲೇಕಲ್ ಗ್ರಾಮದ ಅಬ್ದುಲ್ ರಹಮಾನ್ ತಂದೆ ಅಬ್ದುಲ್ ಗಫರ್, ಈತನ ಗೆಳೆಯ ನಿಯಾಜ್ ಅಹಮದ್ ಬಂಧಿತರಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು 22 ವರ್ಷದ ಅಬ್ದುಲ್ ರಹಮನ್ ಗಲ್ಪ್ ದೇಶಕ್ಕೆ ಹೋಗುವ ಸಲುವಾಗಿ ಪಾಸ್ಪೋರ್ಟ್ಗಾಗಿ ಇಸಿಎನ್ಆರ್ ಕೆಟಗೆರಿಯಲ್ಲಿ ಅರ್ಜಿ ಸಲ್ಲಿಸಿದ್ದ. ಕೇವಲ ಮೂರನೇ ತರಗತಿ ಓದಿದ್ದ ಈತನಿಗೆ ಇಸಿಎನ್ಆರ್ ಕೆಟಗೆರಿಯಲ್ಲಿ ಕ್ಲಿಯರೆನ್ಸ್ ಸಿಗುತ್ತಿರಲಿಲ್ಲ. ಆದರೆ ಕಳ್ಳ ದಾರಿಯಲ್ಲಿ ಇಸಿಎನ್ಆರ್ ಪಡೆಯೋ ಸಲುವಾಗಿ ಅರ್ಜಿ ಸಲ್ಲಿಸಿದ್ದ.
ಈ ಬಗ್ಗೆ ಅನುಮಾನಗೊಂಡ ಪಾಸ್‌ಪೋರ್ಟ್ ಅಥಾರಿಟಿಯವರು ಶಿರಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಅಬ್ದುಲ್ ಗಫಾರ್ ನಕಲಿ ಸರ್ಟಿಫಿಕೇಟ್ ಕೊಟ್ಟಿರೋದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಶ್ವೇತಾ ಅಲಿಯಾಸ್ ಲಕ್ಷ್ಮೀ ಎಂಬಾಕೆಗೆ 25 ಸಾವಿರಕ್ಕೂ ಹೆಚ್ಚು ಹಣ ನೀಡಿ ಪಾಸ್‌ಪೋರ್ಟ್ ಮಾಡಿಕೊಡುವಂತೆ ತಿಳಿಸಿರುವುದು ಬೆಳಕಿಗೆ ಬಂದಿದೆ. ಈ ವ್ಯವಹಾರದ ಹಿಂದೆ ರಾಜ್ಯದ ಹಲವು ಪಾಸ್‌ಪೋರ್ಟ್ ಇಲಾಖೆ ಅಧಿಕಾರಿಗಳು ಇರುವ ಸಾಧ್ಯತೆ ಇದ್ದು, ಈವರೆಗೆ ಎಷ್ಟು ಜನರಿಗೆ ಪಾಸ್‌ಪೋರ್ಟ್ ಮಾಡಿಸಿಕೊಟ್ಟಿದ್ದಾಳೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.