ಕಾರವಾರ:ಜಿಲ್ಲೆಯ ಭಟ್ಕಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಸೋಂಕಿತರನ್ನು ಕಾರವಾರ ಮೆಡಿಕಲ್ ಕಾಲೇಜಿಗೆ ತರುವ ಬದಲು ಭಟ್ಕಳದಲ್ಲಿಯೇ ಚಿಕಿತ್ಸೆ ನೀಡುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಒತ್ತಾಯಿಸಿದ್ದಾರೆ.
ಭಟ್ಕಳದ ಕೊರೊನಾ ಸೋಂಕಿತರಿಗೆ ಅಲ್ಲೇ ಚಿಕಿತ್ಸೆ ಕೊಡಿಸಿ: ಮಾಜಿ ಶಾಸಕರ ಒತ್ತಾಯ
ಭಟ್ಕಳದ ಸೋಂಕಿತರನ್ನ ಕಾರವಾರ ಆಸ್ಪತ್ರೆಗೆ ಶಿಫ್ಟ್ ಮಾಡುವ ಬದಲು ಭಟ್ಕಳದಲ್ಲೇ ವ್ಯವಸ್ಥೆ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ್ ಒತ್ತಾಯಿಸಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ವಕೀಲ ಕೆ.ಆರ್. ದೇಸಾಯಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳದಲ್ಲಿ 12 ಸೋಂಕಿತ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೆ ಇಂದು ಮತ್ತೆ ಏಳು ಪ್ರಕರಣಗಳು ಪತ್ತೆಯಾಗಿವೆ. ಆದರೆ ಇದೀಗ ಪತ್ತೆಯಾದ 13 ಸೋಂಕಿತರನ್ನು ಕಾರವಾರದ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಆದ್ದರಿಂದ ಸೋಂಕಿತರಿಗೆ ಭಟ್ಕಳದಲ್ಲಿಯೇ ಚಿಕಿತ್ಸೆ ನೀಡಬೇಕು. ಮಾತ್ರವಲ್ಲದೇ ಭಟ್ಕಳ ಸಂಪೂರ್ಣ ಸೀಲ್ ಡೌನ್ ಮಾಡಿ, ಪ್ರತಿಯೊಬ್ಬರಿಗೂ ಕೊರೊನಾ ಟೆಸ್ಟ್ ಮಾಡಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡಿ, ಕೋವಿಡ್ ವಾರ್ಡ್ಗೆ ಬೇಕಿರುವ ಸಾಮಗ್ರಿಗಳನ್ನು ಈವರೆಗೂ ತರಿಸಿಲ್ಲ. ಐದು ವಿಧದ ಔಷಧಗಳನ್ನು ಡಬ್ಲ್ಯುಎಚ್ಒ ನಿಯಮಾನುಸಾರ ರೋಗಿಗಳಿಗೆ ನೀಡಲಾಗುತ್ತಿದೆ. ಇದನ್ನು ಭಟ್ಕಳದ ಆಸ್ಪತ್ರೆಯಲ್ಲೇ ನೀಡಬಹುದಿತ್ತು. ಆದರೆ ಇಷ್ಟು ದೂರಕ್ಕೆ ತಂದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯವರಿಗೆ ಅಭಿನಂದಿಸಬೇಕು. ಆದರೆ, ನಮ್ಮಲ್ಲಿ ಆ ಕೆಲಸ ಆಗಿಲ್ಲ. ನಾವು ಈ ವೇಳೆ ಅಭಿನಂದಿಸುವುದಾಗಿ ಹೇಳಿದರು.