ಕಾರವಾರ:ಅವರೆಲ್ಲರೂ ಎಂಡೋಸಲ್ಫಾನ್ಗೆ ತುತ್ತಾಗಿ ಬಹು ಅಂಗಾಂಗ ಕಳೆದುಕೊಂಡ, ಬುದ್ಧಿ ಸರಿಯಾಗಿ ಬಾರದ ಮಕ್ಕಳು, ಬಹುತೇಕರು ಹಾಸಿಗೆಯಲ್ಲಿಯೇ ದಿನ ಕಳೆಯಬೇಕಾದ ಸ್ಥಿತಿ ಇದೆಯಾದರೂ ಕಳೆದ ಕೆಲ ವರ್ಷಗಳಿಂದ ಸರ್ಕಾರದಿಂದ ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯೊಂದು ಮನೆ ಬಾಗಿಲಿಗೆ ಆಂಬುಲೆನ್ಸ್ ಮೂಲಕ ತೆರಳಿ ಚಿಕಿತ್ಸೆ ನೀಡುತ್ತಿದ್ದ ಕಾರಣ ಒಂದಿಷ್ಟು ಮಂದಿ ಚೇತರಿಕೆ ಕಂಡಿದ್ದರು. ಆದರೆ ಇದೀಗ ಸರ್ಕಾರದ ಮೊಂಡುತನದಿಂದಾಗಿ ಕಳೆದ ಎರಡು ತಿಂಗಳಿಂದ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ದೊರೆಯದೇ ಪಡಬಾರದ ಕಷ್ಟ ಅನುಭವಿಸುವಂತಾಗಿದೆ.
ಹೌದು, ಕಳೆದ ಎರಡ್ಮೂರು ದಶಕಗಳ ಹಿಂದೆ ಗೇರು ಮರಗಳಿಗೆ ಬಾಧಿಸಿದ್ದ ರೋಗದ ನಿರ್ಮೂಲನೆಗೆ ಹೆಲಿಕಾಪ್ಟರ್ ಮೂಲಕ ಉಡುಪಿ, ಮಂಗಳೂರು, ಉತ್ತರ ಕನ್ನಡ ಭಾಗದ ಗೇರು ಮರಗಳಿರುವ ಪ್ರದೇಶದಲ್ಲಿ ಎಂಡೋಸಲ್ಫಾನ್ ಔಷಧಿ ಸಿಂಪಡಿಸಲಾಗಿತ್ತು. ಆದರೆ ಇದು ಗೇರು ಗಿಡದ ರೋಗ ವಾಸಿಗಿಂತ ಇದರ ವಿಷ ವರ್ತುಲ ಮನುಷ್ಯರ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಈ ವಿಷ ವರ್ತುಲದಿಂದಾಗಿ ಹುಟುವ ಮಕ್ಕಳಲ್ಲಿ ಅಂಗವೈಕಲ್ಯತೆ, ಬುದ್ಧಿ ಮಾಂದ್ಯತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಈವರೆಗೆ ಸುಮಾರು ಎರಡು ಸಾವಿರ ಮಂದಿ ಎಂಡೋಸಲ್ಫಾನ್ ಪೀಡಿತರಾಗಿದ್ದಾರೆ.
ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎಂಡೋಸಲ್ಫಾನ್ ಪೀಡಿತರು ಇಂತವರಿಗೆ ಅಗತ್ಯ ಚಿಕಿತ್ಸೆಯನ್ನು ಮನೆ ಬಾಗಿಲಲ್ಲೇ ಒದಗಿಸಬೇಕು ಎನ್ನುವ ಉದ್ದೇಶದಿಂದ 2018ರಲ್ಲಿ ಖಾಸಗಿ ಸಂಸ್ಥೆ ಸ್ಕಾಡವೇಸ್ ಸಹಯೋಗದಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ಪ್ರತ್ಯೇಕ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿತ್ತು. ಜಿಲ್ಲೆಯ ಆರು ತಾಲೂಕುಗಳ ವ್ಯಾಪ್ತಿಯಲ್ಲಿರುವ ಬಾಧಿತರಿಗಾಗಿ ಒಟ್ಟು 4 ಆಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದಾಗಿ ಎಂಡೋಸಲ್ಫಾನ್ ಪೀಡಿತರಿಗೆ ಸಾಕಷ್ಟು ಅನುಕೂಲ ಆಗಿತ್ತು. ಆದರೆ ಇದೀಗ ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಮುಗಿದಿದ್ದು, ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿದೆ.
ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಹಾಗೂ ಸಿದ್ದಾಪುರ ಸೇರಿ ಒಟ್ಟು 1972 ಮಂದಿ ಎಂಡೋಸಲ್ಫಾನ್ ಪೀಡಿತರು ಜಿಲ್ಲೆಯಲ್ಲಿದ್ದಾರೆ. ಆಯಾ ತಾಲೂಕುಗಳಿಗೆ ನಿಗದಿಯಾಗಿದ್ದ ಆಂಬುಲೆನ್ಸ್ ಸಿಬ್ಬಂದಿ ತಿಂಗಳಿಗೆ ಒಂದು ಬಾರಿಯಂತೆ ಪ್ರತಿಯೊಬ್ಬ ಎಂಡೋಸಲ್ಫಾನ್ ಬಾಧಿತರ ಮನೆಗೂ ತೆರಳಿ ಅಗತ್ಯ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನ ಒದಗಿಸುತ್ತಿದ್ದರು. ಇದರಿಂದಾಗಿ ಎಂಡೋಸಲ್ಫಾನ್ ಪೀಡಿತರಿಗೂ ಸಾಕಷ್ಟು ಅನುಕೂಲವಾಗಿದ್ದು, ಹಲವರಲ್ಲಿ ಚೇತರಿಕೆ ಸಹ ಕಂಡುಬಂದಿತ್ತು. ಆದ್ರೆ ಕಳೆದೆರಡು ತಿಂಗಳಿನಿಂದ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ಸಿಗುತ್ತಿಲ್ಲವಾಗಿದ್ದು, ಕೊರೊನಾ, ಲಾಕ್ಡೌನ್ ಜಾರಿಯಾಗಿರುವ ಈ ಸಂದರ್ಭದಲ್ಲಿ ರೋಗ ಪೀಡಿತರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಇನ್ನು ಎಂಡೋಸಲ್ಫಾನ್ ಪೀಡಿತರಿಗೆ ಸರಿಯಾದ ಸಮಯಕ್ಕೆ ಔಷಧಗಳನ್ನು ಒದಗಿಸಬೇಕಾಗಿರುವುದು ಅತ್ಯಗತ್ಯವಾಗಿದ್ದು, ಇದು ಅವರ ಆರೋಗ್ಯ ಸ್ಥಿರವಾಗಿರುವಂತೆ ನೋಡಿಕೊಳ್ಳಲು ಅನುಕೂಲಕರವಾಗಿತ್ತು. ಆದರೆ ಇದೀಗ ಮನೆ ಬಾಗಿಲಲ್ಲೇ ಸಿಗುತ್ತಿದ್ದ ಆರೋಗ್ಯ ಸೇವೆ ಸ್ಥಗಿತಗೊಂಡಿದ್ದು, ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೇ ಇರುವ ಪೀಡಿತರನ್ನು ಆಸ್ಪತ್ರೆಗಳಿಗೆ ಹೊತ್ತುಕೊಂಡು ಬರುವುದು ಕುಟುಂಬಸ್ಥರಿಗೆ ಸವಾಲಾಗಿದೆ. ಅಲ್ಲದೇ ಎಂಡೋಸಲ್ಫಾನ್ ಬಾಧಿತರಿಗೆ ನೀಡುವ ಔಷಧಗಳು ಎಲ್ಲೆಡೆ ಸಿಗುವುದು ಸಹ ಕಷ್ಟಕರವಾಗಿದ್ದು, ದುಬಾರಿ ಬೆಲೆಯ ಔಷಧಗಳನ್ನು ಕೊಂಡುತರುವುದು ಹಲವು ಕುಟುಂಬಸ್ಥರಿಗೂ ಆರ್ಥಿಕ ಹೊರೆಯಾಗಿದೆ. ಅಲ್ಲದೆ ಭಟ್ಕಳದಲ್ಲಿ ಅತಿ ಹೆಚ್ಚು ಕುಟುಂಬಗಳು ಬಾಧಿತರಾಗಿದ್ದು, ಕುಟುಂಬವೊಂದರಲ್ಲಿಯೇ ಮೂವರು ಮಕ್ಕಳಿಗೆ ತಗುಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಹೆಣ್ಣುಮಕ್ಕಳು ಸಹ ತಂದೆ-ತಾಯಿ ಕಳೆದುಕೊಂಡು ಅನಾಥರಾಗಿ ಇದೀಗ ಸರ್ಕಾರದಿಂದ ಸಿಗುತ್ತಿದ್ದ ಔಷಧವೂ ಸಿಗದೆ ನರಕಯಾತನೆ ಅನುಭವಿಸುವಂತಾಗಿದೆ.
ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ ಎಂಡೋಸಲ್ಫಾನ್ ಸಂಚಾರಿ ಆರೋಗ್ಯ ಸೇವೆಯ ಒಂದು ಆಂಬುಲೆನ್ಸ್ಗೆ ಸುಮಾರು 3 ಲಕ್ಷ ರೂಪಾಯಿಗಳಂತೆ ತಿಂಗಳಿಗೆ 12 ಲಕ್ಷ ರೂಪಾಯಿಗಳನ್ನ ವ್ಯಯಿಸಲಾಗುತ್ತಿತ್ತು. ಅದನ್ನ 1 ಲಕ್ಷಕ್ಕೆ ಇಳಿಸಬೇಕು ಎನ್ನುವುದು ಸರ್ಕಾರದ ನಿರ್ದೇಶನವಾಗಿದ್ದು, ನಮ್ಮ ಜಿಲ್ಲೆಯಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಸಂಚಾರಿ ಸೇವೆಯನ್ನೇ ಪುನಾರಂಭಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.