ಕಾರವಾರ: ಸರ್ಕಾರ ವಿಕಲಚೇತನರ ಅನುಕೂಲಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆಧಾರ್ ಕಾರ್ಡ್ ಮಾದರಿಯಲ್ಲಿಯೇ ವಿಶೇಷ ಗುರುತಿನ ಚೀಟಿ ನೀಡಿ ಆ ಮೂಲಕ ಫಲಾನುಭವಿಗಳಿಗೆ ಯೋಜನೆ ಲಾಭ ತಲುಪಿಸಲು ಮುಂದಾಗಿದೆ. ಆದರೆ ಈ ಕಾರ್ಡ್ನ್ನು ಜಿಲ್ಲಾಸ್ಪತ್ರೆಯಲ್ಲಿ ವಾರಕ್ಕೆ ಒಂದು ಬಾರಿ ಮಾತ್ರ ನೀಡುತ್ತಿದ್ದು, ವಿಕಲಚೇತನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ವಿಶೇಷ ಗುರುತಿನ ಚೀಟಿಗಾಗಿ ವಿಕಲಚೇತನರ ಪರದಾಟ ಹೌದು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಇಂತಹದೊಂದು ಸ್ಥಿತಿ ಕಂಡುಬಂದಿದ್ದು, ವೀಕಲಚೇತನರು ವಿಶೇಷ ಗುರುತಿನ ಚೀಟಿಗಾಗಿ ದಿನವಿಡೀ ಪರದಾಡುತ್ತಿರುವುದು ಕಂಡುಬಂತು.
ರಾಜ್ಯ ಸರ್ಕಾರ ಆಧಾರ್ ಕಾರ್ಡ್ ನಂತೆ ವಿಕಲಚೇತನರಿಗೆ ವಿಶೇಷ ಗುರುತಿನ ಚೀಟಿ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ, ಗುರುವಾರ ಮಾತ್ರ ವಿಕಲತೆಯ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇದ್ದು, ಜಿಲ್ಲೆಯ ಎಲ್ಲ ವಿಕಲಚೇತನರೂ ಜಿಲ್ಲಾಸ್ಪತ್ರೆಗೇ ಆಗಮಿಸಬೇಕಾಗಿದೆ. ಆದರೆ, ಇಂದು ಎಲ್ಲ ತಾಲೂಕುಗಳಿಂದ ಬೆಳಗ್ಗೆಯಿಂದಲೇ ವಿಕಲಚೇತನರು ಜಿಲ್ಲಾ ಆಸ್ಪತ್ರೆಗೆ ಬಂದು ಜಮಾವಣೆಯಾಗಿದ್ದು, ಆಸ್ಪತ್ರೆಯಲ್ಲಿ ಕೇವಲ ಒಂದೇ ಕೌಂಟರ್ ಇದ್ದಿದ್ದರಿಂದ ವಿಕಲಚೇತನರು ತಮ್ಮ ಸರದಿಗಾಗಿ ಗಂಟೆಗಳ ಕಾಲ ಕಾದು ಕೂರುವಂತಾಯಿತು.
ಇನ್ನು ವಿಕಲಚೇತನರು ವಿಶೇಷ ಗುರುತಿನ ಚೀಟಿಗೆ ಜಿಲ್ಲಾ ಆಸ್ಪತ್ರೆಯ ವೈದ್ಯರಿಂದ ವಿಕಲತೆಯ ಕುರಿತು ಸಹಿ ಪಡೆಯಬೇಕಾಗಿದೆ. ಪ್ರತಿನಿತ್ಯ ತೆರೆದಿರುವ ಕೌಂಟರ್ ಹೊರತುಪಡಿಸಿ ವಿಕಲಚೇತನರಿಗೆ ಬೇರೆ ಕೌಂಟರ್ ತೆರೆಯಲಾಗಿದ್ದು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಕೌಂಟರ್ಗಳು ಭರ್ತಿಯಾಗಿದೆ. ಅಲ್ಲದೇ ಮೂಳೆ, ನರ, ಕಣ್ಣು, ಕಿವಿ ಸೇರಿದಂತೆ ವಿವಿಧ ತಜ್ಞ ವೈದ್ಯರ ಬಳಿ ವಿಕಲಚೇತನರು ಜಮಾವಣೆಯಾಗಿದ್ದು ಇತರೆ ರೋಗಿಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ವೈದ್ಯರು ಸಿಗದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಉತ್ತಮ ಯೋಜನೆಯನ್ನು ರೂಪಿಸಿದೆಯಾದರೂ ಅದನ್ನು ಪಡೆದುಕೊಳ್ಳಲು ವ್ಯವಸ್ಥೆ ರೂಪಿಸುವಲ್ಲಿ ಯಡವಟ್ಟು ಮಾಡಿದೆ. ಕೂಡಲೇ ಪ್ರತಿ ತಾಲೂಕು ಕೇಂದ್ರಗಳಲ್ಲೇ ವಿಕಲಚೇತನರಿಗೆ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆಯಾಗಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ.
ಒಟ್ಟಾರೇ ಸರ್ಕಾರ ವಿಕಲಚೇತನರ ಅನುಕೂಲಕ್ಕೆ ಯೋಜನೆ ರೂಪಿಸಿದೆಯಾದರೂ ಅದನ್ನು ಪಡೆದುಕೊಳ್ಳೋದಕ್ಕೆ ವಿಕಲಚೇತನರು ಪರದಾಡುವಂತಾಗಿರುವುದು ನಿಜಕ್ಕೂ ದುರಂತವೇ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ವಿಕಲಚೇತನರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು ಎನ್ನುವುದು ಸಾರ್ವಜನಿಕರು ಹಾಗೂ ವಿಕಲಚೇತನರ ಒತ್ತಾಯವಾಗಿದೆ.