ಭಟ್ಕಳ(ಉತ್ತರ ಕನ್ನಡ):ಇಲ್ಲಿನ ರಿಬ್ಕೋ ಸಂಸ್ಥೆಯ ಮಾಲೀಕರ ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ರಿಬ್ಕೋ ಸಂಸ್ಥೆಯ ಮಾಲೀಕರರಾದ ಎಸ್ ಎ. ರೆಹಮಾನ್ ಮನೆಯಲ್ಲಿ ಕಳ್ಳತನ ನಡೆದಿದ್ದು, ರಾಜ್ಯದ ಹಲವೆಡೆ ಇವರ ಸಂಸ್ಥೆಯ ಬ್ರಾಂಚ್ಗಳು ಇರುವುದರಿಂದ ತಿಂಗಳಲ್ಲಿ 15 ದಿನಗಳ ಕಾಲ ಇವರು ಬೇರೆಡೆ ಇರುತ್ತಾರೆ.
ಕೆಲಸದ ಹಿನ್ನೆಲೆಯಲ್ಲಿ ಜೂ.21 ರಂದು ಮನೆಯ ಮಾಲೀಕ ಬೆಂಗಳೂರಿಗೆ ತೆರಳಿದ್ದರು. ಇಂದು ಅವರ ಕಾರು ಚಾಲಕ ಮನೆಯನ್ನು ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಸುಮಾರು 7 ಲಕ್ಷದಷ್ಟು ಭಾರತೀಯ ಕರೆನ್ಸಿ, ಹಾಗೂ 4 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, 110 ಗ್ರಾಂ ಚಿನ್ನವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ, ಪಿಎಸ್ಐ ಶ್ರೀಧರ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳವು ಸಂಬಂಧ ಗ್ರಾಮೀಣ ಠಾಣೆಯಲ್ಲಿ ಮನೆಯ ಮಾಲೀಕರ ಪುತ್ರ ಮಹಮ್ಮದ್ ರೂಮೇಜ್ ಶಾಬಂದ್ರಿ ದೂರು ನೀಡಿದ್ದಾರೆ.
ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ: ಮತ್ತೊಂದೆಡೆ ಟ್ರಕ್‌ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಹೊನ್ನಾವರದ ಕವಲಕ್ಕಿ ಬಳಿ ಪೊಲೀಸರು ಟ್ರಕ್ ತಡೆದು ಜಾನುವಾರುಗಳನ್ನು ರಕ್ಷಣೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಹಾವೇರಿ ಜಿಲ್ಲೆ ಹಾನಗಲ್ ಮೂಲದ ಇಸ್ಮಾಯಿಲ್ ಖಾದರ್ ಸಾಬ್, ಮಹಾರಾಷ್ಟ್ರದ ಭೂಷಣನಗರ ನಿವಾಸಿ ಸಂಕೇತ ಬಲಿದ್ ಎಂದು ಗುರುತಿಸಲಾಗಿದೆ.