ಕಾರವಾರ:ಮೊದಲ ದಿನದ ಲಾಕ್ಡೌನ್ ಕಟ್ಟಪ್ಪಣೆಯ ನಡುವೆಯೂ ಜಿಲ್ಲೆಯಾದ್ಯಂತ ರಸ್ತೆಗಿಳಿದ ಒಟ್ಟು 185 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕೊರೊನಾ ಚೈನ್ ಬ್ರೇಕ್ ಮಾಡುವ ನಿಟ್ಟಿನಲ್ಲಿ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡಿದೆ. ಆದರೆ ವಾಹನಗಳನ್ನು ಸಂಪೂರ್ಣ ನಿಷೇಧ ಮಾಡಿದ್ದು, ಆದಾಗ್ಯೂ ವಾಹನಗಳನ್ನು ರಸ್ತೆಗಿಳಿಸಿ ನಿಯಮ ಉಲ್ಲಂಘಿಸಿದ ಹೊನ್ನಾವರದಲ್ಲಿ 27, ಕಾರವಾರದಲ್ಲಿ 21, ಕುಮಟಾದಲ್ಲಿ 18, ಮುಂಡಗೋಡದಲ್ಲಿ 12 ಸೇರಿ ಇತರೆ ತಾಲೂಕುಗಳಲ್ಲಿ ಒಟ್ಟು 185 ವಾಹನಗಳನ್ನು ಸೀಜ್ ಮಾಡಿ ದಂಡ ವಿಧಿಸಿದ್ದಾರೆ.
ಲಾಕ್ಡೌನ್ ಮುಗಿಯುವವರೆಗೂ ಈ ನಿಯಮ ಜಾರಿಯಲ್ಲಿದ್ದು, ಇದು ಜನರಿಗೆ ತೊಂದರೆ ನೀಡುವ ಉದ್ದೇಶದಿಂದಲ್ಲ. ಜನರು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ತೀರಾ ಅಗತ್ಯ ಇದ್ದಲ್ಲಿ ಮಾತ್ರ ಸೂಕ್ತ ಕಾರಣ ನೀಡಿ ತೆರಳಬಹುದು. ಇಲ್ಲದೆ ಇದ್ದಲ್ಲಿ 14 ದಿನಗಳ ಕಾಲ ಮನೆಯಲ್ಲಿಯೇ ಇದ್ದು ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಡಿಸಿ ಸೂಚನೆ...
ಜಿಲ್ಲೆಯಲ್ಲಿ ಮೇ 11ರಿಂದ 3ನೇ ಹಂತದ ಕೊವಿಡ್-19 ಲಸಿಕಾ ಅಭಿಯಾನ ಪ್ರಾರಂಭವಾಗಲಿದ್ದು, 18 ವರ್ಷ ಮೇಲ್ಪಟ್ಟ ಮತ್ತು 44 ವರ್ಷದೊಳಗಿನ ನೋಂದಾಯಿಸಿಕೊಂಡ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಮೇ 1ರಿಂದ ಪ್ರಾಯೋಗಿಕವಾಗಿ ಕೆಲವು ಲಸಿಕಾ ಕೇಂದ್ರಗಳಲ್ಲಿ 18 ವರ್ಷ ತುಂಬಿದ 44 ವರ್ಷದೊಳಗಿನ ಸಾರ್ವಜನಿಕರಿಗೆ ಲಸಿಕಾ ಅಭಿಯಾನ ಹಮ್ಮಿಕೊಂಡಿತ್ತು. ಅದರ ಮುಂದುವರಿದ ಭಾಗವಾಗಿ 3ನೇ ಹಂತದ ಅಭಿಯಾನದ ಮೊದಲ ಹಂತದಲ್ಲಿ ಕ್ರಿಮ್ಸ್ ಸೇರಿದಂತೆ ಜಿಲ್ಲೆಯ 10 ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಲಸಿಕಾ ಕೇಂದ್ರ ತೆರೆದು ಪ್ರತಿದಿನ ಗರಿಷ್ಠ 150 ಫಲಾನುಭವಿಗಳಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಡಿಸಿ ಸೂಚನೆ ಲಸಿಕೆ ಪಡೆಯುವ ಫಲಾನುಭವಿಗಳು ಸ್ವಯಂ ಹೆಸರು ನೋಂದಣಿ ಮಾಡಿಕೊಳ್ಳುವುದು ಹಾಗೂ ಮುಂಗಡವಾಗಿ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೆಸರು ನೋಂದಾಯಿತ ಫಲಾನುಭವಿಗಳು ಲಸಿಕಾ ಕೇಂದ್ರಕ್ಕೆ ಬರುವಾಗ ಅಧಿಕೃತ ಗುರುತಿನ ಚೀಟಿ, ಮೊಬೈಲ್ ಸಂದೇಶ, ನೋಂದಾವಣಿ ಹಾಗೂ ಕಾಯ್ದಿರಿಸಿರುವ ಮಾಹಿತಿಯನ್ನು ಕಡ್ಡಾಯವಾಗಿ ತರಬೇಕು. ಲಸಿಕಾ ಕೇಂದ್ರಗಳಲ್ಲಿ ಯಾರಿಗೂ ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ನಡೆಸಿಕೊಂಡು ಬರುತ್ತಿರುವ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ನೀಡಲಾಗುತ್ತಿರುವ 2ನೇ ಡೋಸ್ ಲಸಿಕೆಯನ್ನು ನೀಡಲು ಆನ್‌ಲೈನ್/ಸ್ಥಳದಲ್ಲೇ ನೋಂದಣಿ ಸೌಲಭ್ಯವಿದ್ದು, ಅದೇ ಆರೋಗ್ಯ ಸಂಸ್ಥೆಯ ಪ್ರತ್ಯೇಕ ಲಸಿಕಾ ಕೇಂದ್ರಗಳಲ್ಲಿ ಯಥಾ ಪ್ರಕಾರ ಮುಂದುವರೆಯುತ್ತದೆ. ಅರ್ಹ ಫಲಾನುಭವಿಗಳು ಆರೋಗ್ಯ ಸೇತು ಆ್ಯಪ್ ಹಾಗೂ www.cowin.gov.in ಮೂಲಕ ಆನ್‌ಲೈನ್ ನೋಂದಣಿ ಮಾಡಬಹುದು ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ 14,313 ಆರೋಗ್ಯ ಸಿಬ್ಬಂದಿ, 6,446 ಮುಂಚೂಣಿ ಕಾರ್ಯಕರ್ತರಿಗೆ ಸೇರಿದಂತೆ 1,91,514 ನಾಗರಿಕರಿಗೆ(45 ವರ್ಷ ಮೇಲ್ಪಟ್ಟವರು) ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.