ಕರ್ನಾಟಕ

karnataka

ETV Bharat / state

ಶಾಸಕಿ ವಿರುದ್ಧ 40 % ಕಮಿಷನ್ ಆರೋಪ: ಕಾರವಾರದಲ್ಲಿ ಆಣೆ ಪ್ರಮಾಣ ಮುನ್ನೆಲೆಗೆ

ಕಾರವಾರದ ಬಿಜೆಪಿ ಶಾಸಕಿ ವಿರುದ್ಧ ಜಿಲ್ಲಾ ಗುತ್ತಿಗೆದಾರ ಸಂಘದಿಂದ 40 % ಕಮಿಷನ್ ಆರೋಪ - ದಾಖಲೆ ಇವೆ ಎಂದು ಮಾಧವ - ಗಣೇಶನ ಮೇಲೆ ಆಣೆ ಪ್ರಮಾಣ

Madhava nayaka Ganesha swears to ganesh God
ಮಾಧವ ನಾಯಕ ಅವರು ಗಣೇಶ ದೇವರ ಮೇಲೆ ಆಣೆ ಪ್ರಮಾಣ ಮಾಡಿರುವುದು.

By

Published : Mar 5, 2023, 6:22 PM IST

Updated : Mar 5, 2023, 7:50 PM IST

ಕಾರವಾರದಲ್ಲಿ 40 % ಕಮಿಷನ್ ಆರೋಪ

ಕಾರವಾರ: ರಾಜ್ಯದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬರುತ್ತಿದ್ದಂತೆ 40% ಕಮಿಷನ್ ಆರೋಪ ಕೂಡ ಮತ್ತೆ ಚರ್ಚೆಗೆ ಬಂದಿದೆ. ಇತ್ತ ಕಾರವಾರದಲ್ಲಿಯೂ ಬಿಜೆಪಿ ಶಾಸಕಿ ವಿರುದ್ಧ 40 % ಕಮಿಷನ್ ಆರೋಪ ಮಾಡಿದ್ದ ಜಿಲ್ಲಾ ಗುತ್ತಿಗೆದಾರ ಸಂಘವೂ, ಆರೋಪಗಳೆಲ್ಲವೂ ದಾಖಲೆ ಸಹಿತ ಮಾಡಿರುವುದಾಗಿ ಆಣೆ ಪ್ರಮಾಣ ಮಾಡಿದೆ. ಅಷ್ಟೇ ಅಲ್ಲದೇ ಶಾಸಕಿಗೂ ಆಣೆ ಪ್ರಮಾಣಕ್ಕೆ ಸವಾಲು ಹಾಕಿದ್ದಾರೆ.

ಹೌದು.. ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರುಗಳಿಂದ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲಿಯೂ ಕಳೆದ ಕೆಲ ದಿನಗಳ ಹಿಂದೆ ಚೆನ್ನಗಿರಿಯ ಬಿಜೆಪಿ ಶಾಸಕನ ಪುತ್ರನ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಕಂತೆ ಕಂತೆ ನೋಟುಗಳನ್ನು ಹೊರತೆಗೆದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದಿರುವುದು ಆರೋಪಗಳಿಗೆ ಪುಷ್ಟಿ ಸಿಕ್ಕಂತಾಗಿದೆ. 40 % ಕಮಿಷನ್ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.

ದಾಖಲೆ ಇಟ್ಟುಕೊಂಡೇ ಆರೋಪ:ಕಾರವಾರದಲ್ಲೇ ಮೊದಲು ಕೇಳಿ ಬಂದಿದ್ದ ಈ 40% ಪರ್ಸಂಟ್ ಭ್ರಷ್ಟಾಚಾರದ ವಿರುದ್ಧ ಮತ್ತೊಮ್ಮೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಾಧವ ನಾಯಕ ಗುಡುಗಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಆದರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಜೊತೆಗೆ ದಾಖಲೆ ಇಟ್ಟುಕೊಂಡೇ ಆರೋಪ ಮಾಡಿದ್ದೇನೆ. ನಾನು ಯಾವುದೇ ಸುಳ್ಳು ಆರೋಪ ಮಾಡಿಲ್ಲ ಎಂದು ಮಾಧವ ನಾಯಕ ಅವರು ಗಣಪತಿ ಮೂರ್ತಿ ಮೇಲೆ ಆಣೆ ಮಾಡಿ ಪ್ರಮಾಣೀಕರಿಸಿದ್ದಾರೆ. ಶಾಸಕಿ ಅವರು ತಾವು ಕಮಿಷನ್ ಪಡೆದಿಲ್ಲ. ಯಾವುದೇ ಸುಳ್ಳು ಹೇಳಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಿ ಸಾಬೀತುಪಡಿಸಲಿ ಎಂದು ಸವಾಲು ಸಹ ಹಾಕಿದ್ದಾರೆ.

ದಾಖಲೆ ಕೋರ್ಟ್​ಗೆ ಸಲ್ಲಿಕೆ: ಇನ್ನು, ಶಾಸಕರು ತಮ್ಮ ವಿರುದ್ಧ ಮಾತಾಡಬಾರದು ಎಂದು ಇಂಜೆಕ್ಷನ್ ಆರ್ಡರ್ ತಂದು ನನ್ನ ಬಾಯಿ ಮುಚ್ಚಿಸಿದ್ದಾರೆ. ಆದರೆ ಪ್ಯಾಕೇಜ್ ಮಾಡಿ ಗುತ್ತಿಗೆ ನೀಡುವ ಕಾರಣ ಸ್ಥಳೀಯ ಗುತ್ತಿಗೆದಾರರು ಕೆಲಸ ಕಳೆದುಕೊಂಡಿದ್ದಾರೆ. ಶಾಸಕರು ವೈಯಕ್ತಿಕವಾಗಿ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ. ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಿದ್ದೇನೆ ಎನ್ನುತ್ತಾರೆ ಜಿಲ್ಲಾ ಸಿವಿಲ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಾಧವ ನಾಯಕ.

ಸುಳ್ಳು ಆರೋಪ ಮಾಡಿ ತೇಜೋವಧೆ: ಇನ್ನು, ಭ್ರಷ್ಟಾಚಾರ ಆರೋಪ ಮಾಡಿರುವ ಮಾಧವ ನಾಯಕ ವಿರುದ್ಧ ಕಿಡಿ ಕಾರಿರುವ ಶಾಸಕಿ ರೂಪಾಲಿ ನಾಯ್ಕ ದಾಖಲೆ ಇದ್ದರೆ‌ ನ್ಯಾಯಾಲಯಕ್ಕೆ ಸಲ್ಲಿಸಲಿ. ಈಗ ಟೆಂಡರ್ ಆಗಿರುವ ಕಾಮಗಾರಿ ಸೈಲ್ ಆಪ್ತರಿಗೆ ಸಂಬಂಧಿಸಿದ ಕಂಪನಿ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಲು ಪ್ರಯತ್ನಿಸುತಿದ್ದಾರೆ. ಈಗಾಗಲೇ ಅವರ ವಿರುದ್ಧ 5 ಕೋಟಿ ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಾರೆ ಚುನಾವಣೆ ಬೆನ್ನಲ್ಲೇ ಭ್ರಷ್ಟಾಚಾರ ಆರೋಪ ಪ್ರತ್ಯಾರೋಪಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅಲ್ಲದೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಬ್ರಹ್ಮಾಂಡ ಭ್ರಷ್ಟಾಚಾರದ ಜತೆಗೆ‌ ಕಾರವಾರದಲ್ಲಿಯೂ 40% ಕಮಿಷನ್ ಆರೋಪ ಆಣೆ ಪ್ರಮಾಣ ತಲುಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂಓದಿ:ಮತ್ತೆ ಶಿವಾಜಿ ಪ್ರತಿಮೆ‌ ಲೋಕಾರ್ಪಣೆ ; ಇದು ನಿಜವಾಗಿಯೂ ಹಾಸ್ಯಾಸ್ಪದ ಎಂದ ಸಿಎಂ ಬೊಮ್ಮಾಯಿ

Last Updated : Mar 5, 2023, 7:50 PM IST

ABOUT THE AUTHOR

...view details