ಶಿರಸಿ(ಉತ್ತರಕನ್ನಡ):ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಉತ್ತರಕನ್ನಡ ಜಿಲ್ಲೆಯ ಒಂದು ಖಾಸಗಿ ಆಸ್ಪತ್ರೆಯನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ.
ಉತ್ತರಕನ್ನಡ: ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ!
ಉತ್ತರಕನ್ನಡ ಜಿಲ್ಲೆಯ ಒಂದು ಖಾಸಗಿ ಆಸ್ಪತ್ರೆಯನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಕೊರೊನಾ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದು, ಸೋಂಕಿತರು ಪರದಾಡುವಂತಾಗಿದೆ.
ಶಿರಸಿಯಲ್ಲಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅಲ್ಲಿ ಒಂದು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಲು 25 ಸಾವಿರ ರೂ. ಚಿಕಿತ್ಸಾ ವೆಚ್ಚ ನೀಡಬೇಕಾಗುತ್ತದೆ. ಒಬ್ಬ ರೋಗಿ ಕನಿಷ್ಠ 4 ರಿಂದ 5 ದಿನಗಳ ಕಾಲ ಉಳಿಯಬೇಕಾದ ಅಗತ್ಯವಿದ್ದು, 2 ಲಕ್ಷ ಬಿಲ್ ಪಾವತಿಸಬೇಕಾಗುತ್ತದೆ. ಇದರಿಂದ ಬಡವರಿಗೆ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಬೇಕಾಬಿಟ್ಟಿ ಹಣ ವಸೂಲಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಖಾಸಗಿ ಆಸ್ಪತ್ರೆಗಳ ವಸೂಲಿಯಿಂದ ಬಡ ರೋಗಿಗಳು ಹೈರಾಣಾಗಿದ್ದು, ಸರ್ಕಾರ ಇದೆಲ್ಲದಕ್ಕೂ ಕಡಿವಾಣ ಹಾಕಿ ಸೂಕ್ತ ದರದಲ್ಲಿ ಚಿಕಿತ್ಸೆ ಸಿಗುವಂತೆ ಮಾಡಬೇಕಿದೆ.