ಕಾರವಾರ:ಅವರೆಲ್ಲರೂ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರು. ಕೊಡುವುದು ಪುಡಿಗಾಸದರೂ ಅದನ್ನೇ ನಂಬಿ ಜೀವನ ನಡೆಸುತ್ತಿದ್ದ ಅವರಿಗೆ ಇದೀಗ ಗುತ್ತಿಗೆ ಪಡೆದ ಕಂಪನಿಗಳು ಕೆಲಸದಿಂದ ತೆಗೆಯಲು ಮುಂದಾಗಿದ್ದು, ಬದುಕು ಬೀದಿಗೆ ಬೀಳುವ ಸ್ಥಿತಿ ಬಂದೊದಗಿದೆ.
ಸದಾ ಒಂದಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುವ ಕಾರವಾರ ಮೆಡಿಕಲ್ ಕಾಲೇಜು ಇದೀಗ ಮತ್ತೆ ಸುದ್ದಿಯಾಗಿದೆ. ಈ ಹಿಂದಿನ ಜಿಲ್ಲಾಸ್ಪತ್ರೆ ಹಾಗೂ ಇದೀಗ ಮೆಡಿಕಲ್ ಕಾಲೇಜಿನಲ್ಲಿ ಹತ್ತಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪಡೆದ ಕಂಪನಿಗಳು ಏಕಾಏಕಿ ಕೆಲಸಕ್ಕೆ ಬರದಂತೆ ಸೂಚಿಸಿವೆ. ಇನ್ನು ಕೆಲವರಿಗೆ 3 ತಿಂಗಳ ಹಿಂದೆಯೇ ಕೆಲಸದಿಂದ ತೆಗೆದು ಹಾಕಿರುವುದಾಗಿ ಇದೀಗ ಸೂಚಿಸಿವೆ. ಇದರಿಂದಾಗಿ ಗುತ್ತಿಗೆ ನೌಕರರು ಕಂಗಾಲಾಗಿದ್ದಾರೆ.
ಬೀದಿಗೆ ಬೀಳುವ ಸ್ಥಿತಿಯಲ್ಲಿ ಕಾರ್ಮಿಕರ ಬದುಕು ಮೆಡಿಕಲ್ ಕಾಲೇಜು ಅಧೀನಕ್ಕೆ ಒಳಪಟ್ಟ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಲು 3 ಕಂಪನಿಗಳು 200ಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ಕ್ಲೀನಿಂಗ್, ಕಂಪ್ಯೂಟರ್ ಆಪರೇಟರ್, ಲ್ಯಾಬ್ ಟೆಕ್ನಿಷಿಯನ್, ಗಾರ್ಡ್ ಸೇರಿದಂತೆ ಇನ್ನಿತರ ಕೆಲಸ ನಿರ್ವಹಿಸುತ್ತಿರುವ ಇಷ್ಟೂ ಮಂದಿಗೂ ಪಿಎಫ್, ಇಎಸ್ಐ ಸೌಲಭ್ಯಗಳಿಲ್ಲ. ವೇತನ ಕೇವಲ 8 ಸಾವಿರ ರೂಪಾಯಿ. ಈ ಪರಿಸ್ಥಿತಿಯಲ್ಲಿ ಇದೀಗ ನಮ್ಮನ್ನು ಏಕಾಏಕಿ ಕೆಲಸದಿಂದ ತೆಗೆಯಲು ಮುಂದಾಗಿದ್ದಾರೆ. ಇದನ್ನು ಒಪ್ಪುವುದಿಲ್ಲ ಎಂದು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಸಮಸ್ಯೆ ಆಲಿಸಿ ಗುತ್ತಿಗೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮೆಡಿಕಲ್ ಕಾಲೇಜಿನ ನಿರ್ದೇಶಕ ಶಿವಾನಂದ ದೊಡ್ಮನಿ ಅವರು ಗುತ್ತಿಗೆ ಕಾರ್ಮಿಕರರೊಂದಿಗೆ ಸಭೆ ನಡೆಸಿದರು. ಕೆಲವರನ್ನು ಅಸಭ್ಯವಾಗಿ ವರ್ತಿಸಿದ ಹಾಗೂ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ತೆಗೆದು ಹಾಕಲಾಗುತ್ತಿದೆ. ಈವರೆಗೆ ನೀಡಬೇಕಾಗಿರುವ ಬಾಕಿ ವೇತನವನ್ನು ನೀಡಲಾಗುವುದು. ಬಳಿಕ ಆಯಾ ವಿಭಾಗದ ಮುಖ್ಯಸ್ಥರು ಸೂಚಿಸಿದವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಉಳಿದವರನ್ನು ಜನವರಿ 1ರಿಂದ ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂದಿದ್ದಾರೆ.
ಮೆಡಿಕಲ್ ಕಾಲೇಜು ನಿರ್ದೇಶಕ ಹಾಗೂ ಜಿಲ್ಲಾಸ್ಪತ್ರೆ ಸರ್ಜನ್ ನಡುವಿನ ಒಳಜಗಳದಿಂದಾಗಿ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಈ ಸಿಬ್ಬಂದಿಯನ್ನು ಬಲಿ ಕೊಡಲಾಗುತ್ತಿದೆ. ಇದೀಗ ನಿರ್ದೇಶಕರು ತಮ್ಮ ಪರವಾಗಿದ್ದವರನ್ನು ಉಳಿಸಿಕೊಂಡು, ಉಳಿದವರನ್ನು ತೆಗೆದುಹಾಕಲು ಮುಂದಾಗಿರುವ ಬಗ್ಗೆ ಗಂಭೀರ ಆರೋಪ ಗುತ್ತಿಗೆ ಕಾರ್ಮಿಕರಿಂದ ಕೇಳಿಬಂದಿದೆ. ಹೀಗಾದರೆ ಬೀದಿಗೆ ಬರುತ್ತೇವೆ. ಒಂದೊಮ್ಮೆ ಇಂತಹ ಸ್ಥಿತಿ ಬಂದರೆ ಎಲ್ಲರೂ ಸೇರಿ ಉಗ್ರ ಹೋರಾಟ ನಡೆಸುವುದಾಗಿ ಗುತ್ತಿಗೆ ಕಾರ್ಮಿಕರು ಎಚ್ಚರಿಸಿದ್ದಾರೆ.