ಕಾರವಾರ (ಉತ್ತರ ಕನ್ನಡ):ರಾಜ್ಯದಲ್ಲಿ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಮಾದರಿಯನ್ನಾಗಿಸಿಕೊಂಡು ದೇಶಾದ್ಯಂತ ಈ ಯೋಜನೆ ಜಾರಿಗೆ ತರಲು ಮಾಧ್ಯಮಗಳು ಪ್ರಧಾನಿ ಮೋದಿಗೆ ಒತ್ತಡ ತರಬೇಕು ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಹೇಳಿದರು.
ನಗರದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿಯಂತೆ ಮೊದಲನೆಯದಾಗಿ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಜನರಿಗೆ, ಬಡ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಆರಂಭಿಸಲಾಗಿದೆ ಎಂದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ಪೂರ್ವ ನುಡಿದಂತೆ ಇದೀಗ ನಡೆದುಕೊಂಡಿದೆ. ಆದರೆ ಬಿಜೆಪಿ ಇದೀಗ ಟೀಕೆ ಮಾಡುತ್ತಿದೆ. ಅವರಿಗೆ ಇಂತಹ ಒಳ್ಳೆಯ ಕೆಲಸ ಮಾಡಿ ಗೊತ್ತಿಲ್ಲ. ಮಾಡಿದ್ದನ್ನೂ ಉಲ್ಟಾ ಪಲ್ಟಾ ಮಾಡಿ ಮಾತನಾಡುವುದು ಅವರ ಅಭ್ಯಾಸ. ಇನ್ನಾದರೂ ಸುಮ್ಮನ್ನಿದ್ದು, ಯೋಜನೆಯ ಲಾಭ ಜನರಿಗೆ ತಲುಪುವಂತೆ ಮಾಡಬೇಕು. ಜೊತೆಗೆ ಇನ್ನೂ ನಾಲ್ಕು ಕಾರ್ಯಕ್ರಮಗಳನ್ನು ಕೂಡ ಸದ್ಯದಲ್ಲಿಯೇ ಎಲ್ಲರಿಗೂ ಮುಟ್ಟಿಸುವಂತೆ ಮಾಡುತ್ತೇವೆ ಎಂದು ಸಚಿವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಬಸ್ ಕೊರತೆ ಆಗಿರುವುದು ನಾವು ಮಾಡಿದ್ದಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿರುವುದಾಗಿದೆ. ನಾವು ಅದನ್ನು ಇದೀಗ ಸರಿಪಡಿಸುವ ಕೆಲಸ ಮಾಡುತ್ತೇವೆ. ರಾಜ್ಯ ಸಾರಿಗೆ ಸಂಸ್ಥೆಯು ನಷ್ಟದಲ್ಲಿದ್ದರೆ, ನಾವು ಅವರಿಗೆ ಈ ಯೋಜನೆ ಮೂಲಕ ಹಣ ನೀಡಿ ಮೇಲಕ್ಕೆ ತರುವ ಪ್ರಯತ್ನ ಮಾಡುತ್ತೇವೆ. ಸಿಬ್ಬಂದಿಯ ಕೊರತೆ ನಮ್ಮ ಅವಧಿಯದ್ದಲ್ಲ. ಕೊರತೆ ನೀಗಿಸಲು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಕಾಳು ವೈದ್ಯ ತಿಳಿಸಿದರು.
ಅಂತರಾಜ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡದ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀವು ಹೇಳಬೇಕು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾದರಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದಂತೆ, ದೇಶಾದ್ಯಂತ ಈ ಯೋಜನೆ ಜಾರಿ ಮಾಡಲು ನೀವು ಒತ್ತಾಯ ಮಾಡಬೇಕು ಎಂದು ಸಮಸ್ಯೆಗೆ ಉತ್ತರಿಸದೆ ನುಣಚಿಕೊಂಡರು.
ಶಕ್ತಿ ಯೋಜನೆಯ ಷರತ್ತುಗಳು:ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಶಕ್ತಿ ಸ್ಮಾರ್ಟ್ ಕಾರ್ಡ್ ಅಗತ್ಯ. ಕಾರ್ಡ್ ಲಭ್ಯವಾಗುವ ತನಕ ಕೇಂದ್ರ, ರಾಜ್ಯ ಸರ್ಕಾರ ನೀಡಿದ ಯಾವುದಾದರೊಂದು ಗುರುತಿನ ಚೀಟಿ ಬಳಕೆ ಮಾಡಬಹುದು.