ಶಿರಸಿ: ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಅಕ್ರಮಗಳನ್ನು ತಡೆಗಟ್ಟಲು ಶಿರಸಿ ನಗರದ ವಿವಿಧ ಭಾಗದಲ್ಲಿ ಆಳವಡಿಸಲಾಗಿದ್ದ 23 ಸಿಸಿಟಿವಿ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ 15 ಲಕ್ಷ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಪದೇ ಪದೆ ಕೈಕೊಡುತ್ತಿರುವ ಸಿಸಿಟಿವಿ ಶಿರಸಿ ನಗರಸಭೆ ಹಾಗೂ ಶಿರಸಿ ಪೊಲೀಸ್ ಇಲಾಖೆಯ ಮುತುವರ್ಜಿಯಿಂದ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಗರಸಭಾ ವಿಶೇಷ ಅನುದಾನದಡಿಯಲ್ಲಿ 23 ಸಿಸಿಟಿವಿಗಳನ್ನು ಆಳವಡಿಕೆ ಮಾಡಲಾಗಿತ್ತು. ಆದರೆ ಅವುಗಳಲ್ಲಿ ಬಹುತೇಕ ಸಿಸಿಟಿವಿಗಳು ಕೆಟ್ಟು ನಿಂತಿದ್ದು, 15 ಲಕ್ಷ ರೂ. ವೆಚ್ಚದ ಯೋಜನೆ ಯಾರಿಗೂ ಉಪಯೋಗಕ್ಕೆ ಇಲ್ಲದಂತಾಗಿದೆ.
ಮೆ. 6, 2018ರಂದು ಕಾಮಗಾರಿ ಆರಂಭಿಸಿ ಮೇ 26, 2018ಕ್ಕೆ ನಗರದ 23 ಕಡೆಗಳಲ್ಲಿ ಸಿಸಿಟಿವಿ ಆಳವಡಿಸಲಾಗಿತ್ತು. ನಗರಸಭೆ ವತಿಯಿಂದ ಕಾಮಗಾರಿ ನಡೆದಿದ್ದರೂ ಅದನ್ನು ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು. ಬೆಂಗಳೂರಿನ ಮೌರ್ಯ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಿ, 2 ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂದು ಕರಾರು ಮಾಡಿಕೊಳ್ಳಲಾಗಿತ್ತು. ಆದರೆ ಈಗ ಸಿಸಿಟವಿ ಹಾಳಾಗಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ನಿರ್ವಹಣೆ ಇಲ್ಲದೇ ಸಾರ್ವಜನಿಕರ ಹಣ ಪೋಲಾಗಿದ್ದು, ಗುತ್ತಿಗೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನೂತನ ಸಂಚಾರಿ ನಿಯಮಗಳು ಜಾರಿಗೆ ಬಂದ ನಂತರದಲ್ಲಿ ದಂಡದ ಮೊತ್ತ ಹೆಚ್ಚಾಗಿದ್ದು, ಜನರು ಅದರಿಂದ ತಪ್ಪಿಸಿಕೊಂಡು ಓಡಾಡಲು ಸಾಕಷ್ಟು ದಾರಿಗಳನ್ನು ಹುಡುಕುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸಿಸಿಟಿವಿಯೂ ಉಪಯೋಗಕ್ಕೆ ಬಾರದೆ ಸಂಚಾರಿ ನಿಯಮ ಉಲ್ಲಂಘನೆ ತಪ್ಪಿಸಲು ಪೊಲೀಸ್ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ನಿರ್ವಹಣೆ ಇಲ್ಲದೇ ಸಿಸಿಟಿವಿ ಕ್ಯಾಮರಾಗಳು ಪದೇ ಪದೆ ಕೆಟ್ಟು ಹೋಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುತ್ತಿಗೆ ಕಂಪನಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಜನರ ಹಣ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.