ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿನ ಕೈಗಾ ಅಣುವಿದ್ಯುತ್ ಸ್ಥಾವರದಿಂದ ರೇಡಿಯೆಷನ್ ಪರಿಣಾಮವಾಗಿ ಆ ಭಾಗದ ಕಳಚೆ, ಮಲವಳ್ಳಿ, ಬಾರೆ, ಬಾಸಲ್, ಭಾಗಿನಕಟ್ಟಾ, ಬೀಗಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನತೆ ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆಯಿಂದ ಮಕ್ಕಳು ಸಹ ಮೃತಪಡುತ್ತಿರುವುದು ವಿಶೇಷವೇನಲ್ಲ. ಆದರೆ, ಇತ್ತೀಚಿಗೆ ಶಿರಸಿಯಲ್ಲಿ ಯಾವುದೇ ರೆಡಿಯೇಷನ್ ಅಥವಾ ವಿಶೇಷ ಯೋಜನೆ ಇರದ ಭಾಗದಲ್ಲೂ ಕ್ಯಾನ್ಸರ್ ನಂತಹ ಮಾರಕ ರೋಗ ಕಾಣಿಸಿಕೊಳ್ಳುತ್ತಿದ್ದು, ಭಾರಿ ಅಪಾಯಕಾರಿಯಾಗಿ ಪರಿಣಮಿಸಿದೆ.
ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹಲವು ಹಳ್ಳಿಗಳಲ್ಲಿ ಈಗ ನೋವು ಮುಗಿಲುಮುಟ್ಟಿದೆ. ಎತ್ತೆತ್ತರದ ಗುಡ್ಡಗಳ ಮಧ್ಯೆ ನಾಲ್ಕಾರು ಮನೆಗಳ ಪುಟ್ಟ ಹಳ್ಳಿಗಳಾದರೂ ಈ ನೋವು ಎಲ್ಲೆಡೆ ಬಾಧಿಸಿದೆ. ಇದಕ್ಕೆ ಮುಖ್ಯ ಕಾರಣ ಕ್ಯಾನ್ಸರ್ ಎಂಬ ಮಹಾಮಾರಿ.
ಹೌದು, ಇಲ್ಲಿಯ ತಟಗುಣಿ, ತಡಗುಣಿ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ. ಆಗುತ್ತಲೇ ಇದೆ. ಕಳೆದೊಂದು ದಶಕದಲ್ಲಿ ಸಾವಿನ ಮನೆಯ ಕದ ತಟ್ಟಿದವರು ಅನೇಕರಾದರೆ, ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರು ಇನ್ನೂ ಅನೇಕ. ಸಣ್ಣ ಹಿಡುವಳಿದಾರರಾಗಿ ಬರುವ ಪುಟ್ಟ ಆದಾಯವನ್ನೂ ಮಹಾನಗರಗಳ ದೊಡ್ಡಾಸ್ಪತ್ರೆಗೆ ಸುರಿಯುತ್ತಿದ್ದಾರೆ.
25ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿದ್ದಾರೆ: ಒಂದೆಡೆ ಆತಂಕ, ಇನ್ನೊಂದೆಡೆ ಭರಿಸಲಾಗದ ಆಸ್ಪತ್ರೆ ಬಿಲ್ ಇಲ್ಲಿಯ ಕೃಷಿಕರನ್ನು ಹಸಿ ಬಟ್ಟೆ ಹಿಂಡಿದಂತೆ ಹಿಂಡುತ್ತಿವೆ. ನೆಗ್ಗು ಪಂಚಾಯಿತಿ ವ್ಯಾಪ್ತಿಯ ಈ ಭಾಗದ ಇಪ್ಪತ್ತಕ್ಕೂ ಅಧಿಕ ಹಳ್ಳಿಗಳಲ್ಲಿ ಸುಮಾರು 25ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿದ್ದಾರೆ. ಆದರೆ, ಕಾರಣ ಮಾತ್ರ ನಿಗೂಢವಾಗಿದೆ.