ಕಾರವಾರ : ಇತ್ತೀಚಿಗೆ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಮಂಡ್ಯ ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿನಿಯನ್ನು ಪ್ರಶಂಸಿಸಿದ್ದ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಈತನ ಹೇಳಿಕೆಯಿಂದ ಈಗ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಉತ್ತರಕನ್ನಡ ಲೋಕಸಭಾ ಸಂಸದ ಅನಂತಕುಮಾರ ಹೆಗಡೆ ಮುಖ್ಯಮಂತ್ರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಎರಡು ತಿಂಗಳ ಹಿಂದೆ ಮಂಡ್ಯದ ಕಾಲೇಜೊಂದರಲ್ಲಿ ಹಿಜಾಬ್ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ 'ಜೈ ಶ್ರೀರಾಮ್ ಘೋಷಣೆ ಪ್ರತಿಯಾಗಿ, ಮುಸ್ಲಿಂ ಯುವತಿಯು 'ಅಲ್ಲಾ ಹು ಅಕ್ಬರ್' ಎಂದು ಕೂಗುತ್ತಾ ತರಗತಿಗೆ ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಬಳಿಕ ಮುಸ್ಲಿಂ ಯುವತಿಯನ್ನು ಹಲವು ಮುಸ್ಲಿಂ ಮುಖಂಡರು ಭೇಟಿಯಾಗಿ, ಬಹುಮಾನವನ್ನು ಘೋಷಿಸಿದ್ದರು. ಈ ಘಟನೆ ನಡೆದು ಎರಡು ತಿಂಗಳ ಬಳಿಕ ಇದೀಗ ಅಲ್ ಖೈದಾ ಮುಖ್ಯಸ್ಥ ಅಲ್ ಜವಾಹಿರಿ ಈ ಯುವತಿಗೆ ಶಹಬ್ಬಾಸ್ ಗಿರಿ ನೀಡಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಇದು ಸದ್ಯ ಇನ್ನೊಂದು ವಿವಾದಕ್ಕೆ ಎಡೆ ಮಾಡಿದೆ.
ಈ ಬಗ್ಗೆ ತನಿಖೆ ನಡೆಸಬೇಕೆಂದು ಉತ್ತರಕನ್ನಡ ಲೋಕಸಭಾ ಸಂಸದ ಅನಂತಕುಮಾರ ಹೆಗಡೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.'ಈ ಹಿಂದೆ ಹಿಜಾಬ್ ವಿವಾದ ತಾರಕ್ಕೇರಿದ್ದ ಸಂದರ್ಭದಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಇದಕ್ಕುತ್ತರವಾಗಿ ಬೀಬಿ ಮುಸ್ಕಾನ್ ಎಂಬ ಬುರ್ಖಾಧಾರಿ ವಿದ್ಯಾರ್ಥಿನಿಯು 'ಅಲ್ಲಾ ಹೂ ಅಕ್ಬರ್' ಎಂದು ಕೂಗಿದ್ದ ವಿಡಿಯೋ ಜಗತ್ತಿನೆಲ್ಲಡೆ ಪ್ರಮುಖ ನ್ಯೂಸ್ ಚಾನೆಲ್‌ಗಳಲ್ಲಿ ಪ್ರಸಾರವಾಗಿ, ಸದರಿ ವಿದ್ಯಾರ್ಥಿನಿಯು ದಿಢೀರ್ ಪ್ರಸಿದ್ಧಿಯನ್ನು ಪಡೆದಿದ್ದ ಘಟನೆ ನಡೆದಿತ್ತು.