ಶಿರಸಿ (ಉತ್ತರ ಕನ್ನಡ):ತಾಲೂಕಿನ ಬನವಾಸಿಯ ಅಜ್ಜರಣಿ ಗ್ರಾಮಸ್ಥರಿಗೆ ಶಾಶ್ವತ ಸೇತುವೆ ಮರೀಚಿಕೆಯಾಗಿದೆ. ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿಯೇ ನೂತನ ಸೇತುವೆ ಕಾಮಗಾರಿ ಗುತ್ತಿಗೆ ನೀಡಿ, 2 ವರ್ಷ ಕಳೆದರೂ ಇನ್ನೂ ಅನುಷ್ಠಾನವಾಗದಿರುವುದು ಸಮಸ್ಯೆಗೆ ಕಾರಣವಾಗಿದೆ.
ಗುತ್ತಿಗೆ ನೀಡಿ ಎರಡು ವರ್ಷ ಕಳೆದರೂ ಅನುಷ್ಠಾನವಾಗದ ಅಜ್ಜರಣಿ ಸೇತುವೆ ಕಾಮಗಾರಿ..! ಬನವಾಸಿಯ ವರದಾ ನದಿ ಪ್ರವಾಹದಿಂದ ಸಂಪರ್ಕ ಸಮಸ್ಯೆ ಅನುಭವಿಸುತ್ತಿರುವ ಅಜ್ಜರಣಿ ಸುತ್ತಮುತ್ತ ನೂರಾರು ಮನೆಗಳಿವೆ. ಇಲ್ಲಿನ ಜನರು ವ್ಯಾಪಾರ-ವಹಿವಾಟು, ಆಸ್ಪತ್ರೆ, ಬಸ್ ನಿಲ್ದಾಣ ಎಲ್ಲದಕ್ಕೂ ಬನವಾಸಿಯನ್ನೇ ಅವಲಂಬಿಸಿದ್ದಾರೆ. ಈ ಊರಿನಿಂದ ಬನವಾಸಿಗೆ ಹೋಗುವ ಮಧ್ಯೆ ಚಿಕ್ಕದೊಂದು ಸೇತುವೆಯಿದೆ. ತಗ್ಗಿನಲ್ಲಿರುವ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ಜೊತೆಗೆ ಎತ್ತರಿಸಬೇಕು ಎಂಬುದು ಇಲ್ಲಿನ ಜನರ ದಶಕಗಳ ಹಿಂದಿನ ಬೇಡಿಕೆಯಾಗಿದೆ.
ವರದಾ ನದಿಗೆ ಪ್ರವಾಹ ಬಂದರೆ ಈ ಸೇತುವೆ ಮುಳುಗುತ್ತದೆ. ಸುತ್ತಲಿನ ಪ್ರದೇಶಗಳ ಕೃಷಿ ಭೂಮಿ ಜಲಾವೃತವಾಗುತ್ತದೆ. ಇದೇ ಕಾರಣದಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರು, ಹೊಸ ಸೇತುವೆ ನಿರ್ಮಿಸಲು 2018ರಲ್ಲೇ ಆದೇಶ ಮಾಡಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಈ ಸೇತುವೆ ಕಾಮಗಾರಿ ನಡೆಸುವಂತೆ ಸೂಚಿಸುವ ಜೊತೆಗೆ ಈಗಾಗಲೇ 1.8 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ಕೂಡ ನೀಡಲಾಗಿತ್ತು. ಆದರೆ, ಕಾಮಗಾರಿ ಅನುಷ್ಠಾನ ಮಾತ್ರ ಈವರೆಗೂ ಆಗಿಲ್ಲ.
ವರದಾ ನದಿ ಪ್ರವಾಹ ಉಂಟಾಗಿ ಸೇತುವೆ ಮುಳುಗಿದರೆ, ಅಜ್ಜರಣಿ, ಮತ್ಕುಣಿ, ಕಂತ್ರಾಜಿ, ಗುಡ್ನಾಪುರ ಭಾಗದ ಸುಮಾರು 4 ಸಾವಿರ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜನರ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.