ಕಾರವಾರ: ವಯೋವೃದ್ಧ ಪತಿ ಅಗಲಿಕೆಯಿಂದ ಆಘಾತಕ್ಕೊಳಗಾದ ಪತ್ನಿಯೂ ಸಾವನ್ನಪ್ಪಿದ್ದು, ಸಾವಿನಲ್ಲೂ ಒಂದಾದ ಘಟನೆ ನಗರದ ಮಾರುತಿಗಲ್ಲಿಯಲ್ಲಿ ಶನಿವಾರ ನಡೆದಿದೆ. ಮಾರುತಿಗಲ್ಲಿ ನಿವಾಸಿಗಳಾದ ಗೋಪಾಲ ದಾಮೋದರ ಶಾನಭಾಗ (80) ಹಾಗೂ ಅವರ ಪತ್ನಿ ಸುರೇಖಾ ಶಾನಭಾಗ (74) ಮೃತ ಸತಿ ಪತಿಗಳು.
ಕಿರಾಣಿ ವ್ಯಾಪಾರಿಯಾಗಿದ್ದ ಗೋಪಾಲ ದಾಮೋದರ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಈ ಸುದ್ದಿ ಕೇಳುತ್ತಿದ್ದಂತೆ ಅವರ ಪತ್ನಿ ಕೂಡ ಮನೆಯಲ್ಲಿ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದರು. ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಪ್ರಯೋಜನವಾಗದೇ ಸಾವನ್ನಪ್ಪಿದ್ದಾರೆ. ಭಾನುವಾರ ಇಬ್ಬರ ಅಂತ್ಯಕ್ರಿಯೆ ನೆರವೇರಿದೆ.
ನಗರದಲ್ಲಿ ಬ್ರಿಟಿಷ್ ಆಳ್ವಿಕೆ ಕಾಲದಿಂದಲೂ ದಾಮೋದರ ನಾಗಪ್ಪ ಶಾನಭಾಗ ಹೆಸರಿನ ಕಿರಾಣಿ ಅಂಗಡಿ ಹೊಂದಿದ್ದರು. ದಾಮೋದರ ಶಾನಭಾಗ ಅವರ ನಾಲ್ವರು ಮಕ್ಕಳ ಪೈಕಿ ಗೋಪಾಲ ಕೂಡ ಒಬ್ಬರಾಗಿದ್ದರು. ಅವಿಭಜಿತ ಕುಟುಂಬದ ನಾಲ್ವರು ಸೇರಿಯೇ ಕಿರಾಣಿ ವ್ಯಾಪಾರ ನಡೆಸುತ್ತಿದ್ದರು.
ಲಾರಿ ಹಾಯ್ದು ಇಬ್ಬರು ಯುವಕರು ಸಾವು : ಬೈಕ್ ಸ್ಕಿಡ್ ಆಗಿ ಬಿದ್ದ ಬಳಿಕ ಇಬ್ಬರು ಯುವಕರ ಮೇಲೆ ಲಾರಿ ಹಾಯ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲ್ಲಾಪುರ ಸಮೀಪದ ಕಿರವತ್ತಿ ಬಳಿ ನಡೆದಿದೆ. ತಂಬೂರಿನ ಸೂರಜ್ ಪಾಲಂಕರ್ ಹಾಗೂ ಮಂಜುನಾಥ ವೀರಭದ್ರ ಬಡಿಗೇರ ಮೃತ ಯುವಕರು. ಇವರಿಬ್ಬರೂ ಕಿರವತ್ತಿಯಿಂದ ಯಲ್ಲಾಪುರಕ್ಕೆ ಫೋಟೋಶೂಟ್ಗೆ ಎಂದು ಬಂದಿದ್ದರು ಎನ್ನಲಾಗಿದೆ. ಬಳಿಕ, ಯಲ್ಲಾಪುರದಿಂದ ಕಿರವತ್ತಿಗೆ ಹೋಗುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಹೆದ್ದಾರಿಯಲ್ಲಿ ಬಿದ್ದಿದ್ದಾರೆ. ಈ ವೇಳೆ ಲಾರಿಯೊಂದು ಹೆದ್ದಾರಿಯಲ್ಲಿ ಬಿದ್ದ ಬೈಕ್ ಸವಾರರ ಮೇಲೆ ಹಾದು ಹೋಗಿದೆ. ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಸೆಖೆ ತಾಳಲಾರದೆ ಮನೆ ಹೊರಗೆ ಮಲಗಿದ್ರು; ಹೊಂಚು ಹಾಕಿದ್ದ ಕಳ್ಳರು ನಗದು, ಚಿನ್ನಾಭರಣ ದೋಚಿದ್ರು
ಮನೆ ದೋಚಿದ ಕಳ್ಳರು :ಮನೆಯೊಂದರಲ್ಲಿ ಯಾರೂ ಇಲ್ಲ ಎನ್ನುವುದನ್ನು ತಿಳಿದ ಕಳ್ಳರು, ಬಾಗಿಲು ಮುರಿದು ಸುಮಾರು 25 ಲಕ್ಷಕ್ಕೂ ಅಧಿಕ ಬೆಲೆಬಾಳುವ ಚಿನ್ನಾಭರಣ, ಬೆಳ್ಳಿ ಹಾಗೂ ಇತರ ಸಾಮಗ್ರಿಗಳನ್ನು ದೋಚಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಕಳೆದ ಜೂ.8 ರಂದು ಭಟ್ಕಳದ ಚಿತ್ರಾಪುರದ ನಿವಾಸಿಯಾದ ಮಾಜಿ ಸೈನಿಕ ಮಹೇಶ ಪಂಡಿತ್ ಅವರು ಮನೆಯ ಬಾಗಿಲು ಹಾಕಿ ಮುಂಬೈಗೆ ತೆರಳಿದ್ದರು. ತಮ್ಮ ಸಹೋದರ ಮೃತಪಟ್ಟಿದ್ದರಿಂದ ಅನಿವಾರ್ಯವಾಗಿ ಹೋಗಬೇಕಾಗಿ ಬಂದಿದ್ದರಿಂದ ಮನೆಗೆ ಬೀಗ ಹಾಕಿ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು, ಮುಂಬಾಗಿಲನ್ನು ಒಡೆದು ಒಳಹೊಕ್ಕು ಅಂದಾಜು 25 ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಮತ್ತು ಇತರ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, 530 ಗ್ರಾಮ ಚಿನ್ನ, 8 ಕೆ.ಜಿ ಬೆಳ್ಳಿ ಆಭರಣಗಳು ಮನೆಯಲ್ಲಿದ್ದವು ಎನ್ನಲಾಗಿದೆ.
ಇದನ್ನೂ ಓದಿ :ಶಿವಮೊಗ್ಗದಲ್ಲಿ ಬೈಕ್ ಮೇಲೆ ಬಂದು ಮೊಬೈಲ್ ಕದ್ದು ಪರಾರಿ ಪ್ರಕರಣ: ಬಾಲಕರ ಬಂಧನ, 23 ಮೊಬೈಲ್ ವಶಕ್ಕೆ
ಶನಿವಾರ ಸಂಜೆ ಪಕ್ಕದ ಮನೆಯವರು ಪಂಡಿತ್ ಅವರ ಮನೆಯ ಬಾಗಿಲು ತೆರೆದುಕೊಂಡಿರುವ ಕುರಿತು ಅನುಮಾನಗೊಂಡು ನೋಡಿದಾಗ ಮನೆಯ ಮಾಲೀಕರು ಬರಲಿಲ್ಲ ಎನ್ನುವುದು ತಿಳಿಯಿತು. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಪೊಲೀಸರು ಬಂದು ತಪಾಸಣೆ ಮಾಡಿದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರು ಬಂದು ತನಿಖೆ ಆರಂಭಿಸಿದ್ದಾರೆ. ಡಿವೈಎಸ್ಪಿ ಶ್ರೀಕಾಂತ ನಾಯ್ಕ, ಪೊಲೀಸ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಸತೀಶ ನಾಯ್ಕ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹೆಚ್ಚುವರಿ ಎಸ್ಪಿ ಭೇಟಿ : ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಸಿ.ಟಿ. ಜಯಕುಮಾರ್ ಭೇಟಿ ನೀಡಿದ್ದು, ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಅಕ್ಕಪಕ್ಕದಲ್ಲಿರುವ ಸಿಸಿಟಿವಿಗಳನ್ನು ಹಾಗೂ ಚೆಕ್ ಪೋಸ್ಟ್ ಗಳಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಕಲೆ ಹಾಕುತ್ತಿದ್ದು, ಕಳ್ಳರನ್ನು ಪತ್ತೆ ಹಚ್ಚುವ ವಿಶ್ವಾಸದಲ್ಲಿ ಇಲಾಖೆ ಇದೆ.